ಮಂಗಳೂರು : ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರಲ್ಲಿ ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ವಾಸ್ತವ್ಯ ಹೂಡಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ನಗರ ಪೊಲೀಸರು ದಾಳಿ ನಡೆಸಿ ಎಂಟು ಮಂದಿಯನ್ನು ಬಂಧಿಸಿದ್ದಾರೆ.
ದಾಳಿಯ ವೇಳೆ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಒಟ್ಟು 54 ಕಾರ್ಮಿಕರ ಗುರುತಿನ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದರು. ಸುದೀರ್ಘ ವಿಚಾರಣೆ ಹಾಗೂ ದಾಖಲೆಗಳ ಪರಿಶೀಲನೆಯ ಬಳಿಕ, ಅವರಲ್ಲಿ ಎಂಟು ಮಂದಿ ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ಭಾರತ ಪ್ರವೇಶಿಸಿ ನಕಲಿ ದಾಖಲೆಗಳ ಆಧಾರದಲ್ಲಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಎಂ.ಡಿ. ಮುಕ್ತಾರ್ ಅಲಿ (36), ಎಂ.ಡಿ. ರಕೀಬುರ್ ಹೊಸೇನ್ (44), ಎಂ.ಡಿ. ಅಜರುಲ್ ಇಸ್ಲಾಂ (36), ಎಂ.ಡಿ. ಜಾಹಿದ್ ಹೊಸೇನ್ (18), ಎಂ.ಡಿ. ಬೆಲಾಲ್ ಹೊಸೇನ್ (36), ಎಂ.ಡಿ. ಹಸಿಬುಲ್ ಹಸನ್ ಶಾಂತೋ (37), ಎಂ.ಡಿ. ಸಮೆಯುಲ್ ಹಸನ್ (23) ಹಾಗೂ ಎಂ.ಡಿ. ಸೈಬುರ್ ರಹಮಾನ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬಾಂಗ್ಲಾದೇಶದ ರಾಜಶಾಹಿ ವಿಭಾಗದ ವಿವಿಧ ಗ್ರಾಮಗಳ ನಿವಾಸಿಗಳಾಗಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಸುಮಾರು ಮೂರು ತಿಂಗಳ ಹಿಂದೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮಾರ್ಗವಾಗಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದರು. ಬಳಿಕ ಮುರ್ಷಿದಾಬಾದ್ ವಿಳಾಸ ಹೊಂದಿದ್ದ ಆಧಾರ್ ಕಾರ್ಡ್‌ಗಳ ಬಣ್ಣದ ಜೆರಾಕ್ಸ್ ಪ್ರತಿಗಳ ಮೇಲೆ ತಮ್ಮ ಭಾವಚಿತ್ರಗಳನ್ನು ಅಂಟಿಸಿ, ಅವುಗಳನ್ನು ಗುರುತಿನ ದಾಖಲೆಯಾಗಿ ಗುತ್ತಿಗೆದಾರರಿಗೆ ಸಲ್ಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ದಾಖಲೆಗಳ ಆಧಾರದ ಮೇಲೆ ಅವರು ಕಳೆದ ಎರಡು ತಿಂಗಳಿನಿಂದ ಮುಕ್ಕದಲ್ಲಿನ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆಯನ್ನು ಸುರತ್ಕಲ್ ಪೊಲೀಸರು ಮುಂದುವರಿಸಿದ್ದಾರೆ.
Post a Comment