ಮಂಗಳೂರು : ಕರ್ನಾಟಕ ಸರ್ಕಾರದ ಆದೇಶದಂತೆ 2026ರ ಜೂನ್ 21ರಿಂದ ಜುಲೈ 10ರವರೆಗೆ ಬಾಕಿ ಉಳಿದಿದ್ದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತಕ್ಕೆ 50% ರಿಯಾಯಿತಿ ನೀಡಲಾಗಿತ್ತು. ಈ ವಿಶೇಷ ಅವಕಾಶವನ್ನು ಬಳಸಿಕೊಂಡು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 35,160 ಬಾಕಿ ಪ್ರಕರಣಗಳು ಇತ್ಯರ್ಥಗೊಂಡಿವೆ.
ಈ ಅವಧಿಯಲ್ಲಿ ವಾಹನ ಸವಾರರು ಒಟ್ಟು ₹92,43,400 ದಂಡವನ್ನು ಆನ್‌ಲೈನ್ ಹಾಗೂ ಪೊಲೀಸ್ ಠಾಣೆಗಳಿಗೆ ನೇರವಾಗಿ ಪಾವತಿಸುವ ಮೂಲಕ ಪ್ರಕರಣಗಳನ್ನು ಮುಕ್ತಾಯಗೊಳಿಸಿದ್ದಾರೆ.
ಇತ್ಯರ್ಥಗೊಂಡ ಪ್ರಕರಣಗಳಲ್ಲಿ 18,792 ಪ್ರಕರಣಗಳು ಎಐ ಕ್ಯಾಮೆರಾಗಳ ಮೂಲಕ ದಾಖಲಾಗಿದ್ದರೆ, 16,368 ಪ್ರಕರಣಗಳು ಸಂಚಾರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯದ ವೇಳೆ ಪತ್ತೆಹಚ್ಚಿದ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದ್ದಾಗಿವೆ.
224 ಚಾಲಕರ ಡಿಎಲ್ ಅಮಾನತಿಗೆ ಕ್ರಮ
ರಸ್ತೆ ಸುರಕ್ಷತೆ ಹೆಚ್ಚಿಸುವ ಮತ್ತು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸರು 2026ರಲ್ಲಿ ದಾಖಲಾದ ಘೋರ ಅಪಘಾತ ಹಾಗೂ ಗಂಭೀರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ 224 ವಾಹನ ಚಾಲಕರ ಚಾಲನಾ ಪರವಾನಗಿಗಳನ್ನು (ಡಿಎಲ್) ವಶಪಡಿಸಿಕೊಂಡು, ಅಮಾನತುಗೊಳಿಸುವಂತೆ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ಕಚೇರಿಗಳಿಗೆ ಶಿಫಾರಸು ಸಲ್ಲಿಸಿದ್ದಾರೆ.
ಈವರೆಗೆ 137 ಚಾಲನಾ ಪರವಾನಗಿಗಳು ಅಮಾನತಾಗಿದ್ದು, ಉಳಿದ ಪ್ರಕರಣಗಳಲ್ಲಿ ಅಮಾನತು ಪ್ರಕ್ರಿಯೆ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸರು ತಿಳಿಸಿದ್ದಾರೆ.
Post a Comment