ಮಂಗಳೂರು ಪಾಲಿಕೆಯಲ್ಲಿ ಜನನ-ಮರಣ ಅರ್ಜಿ ಸ್ವೀಕಾರಕ್ಕೆ ಅಡ್ಡಿ, ಭೂಪರಿವರ್ತನೆ ಪ್ರಕ್ರಿಯೆಯಲ್ಲೂ ಗೊಂದಲ: ರಾಜ್ಯ ಸರ್ಕಾರದ ವಿರುದ್ಧ ಶಾಸಕ ವೇದವ್ಯಾಸ ಕಾಮತ್ ವಾಗ್ದಾಳಿ


ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರಗಳ ಅರ್ಜಿ ಸ್ವೀಕಾರದಲ್ಲಿ ಉಂಟಾಗಿರುವ ಸಮಸ್ಯೆ ಹಾಗೂ ನಗರ ವ್ಯಾಪ್ತಿಯ ಭೂಪರಿವರ್ತನೆ (ಕನ್ವರ್ಷನ್) ಪ್ರಕ್ರಿಯೆಯಲ್ಲಿನ ಗೊಂದಲ ಕುರಿತು ಶಾಸಕ ವೇದವ್ಯಾಸ ಕಾಮತ್ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಐಆರ್ ಕರ್ತವ್ಯಕ್ಕೆ ಪಾಲಿಕೆಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನಿಯೋಜಿಸಿರುವ ಕಾರಣ, ಜನನ ಮತ್ತು ಮರಣ ನೋಂದಣಿ ಘಟಕದಲ್ಲಿ ಒಂದು ತಿಂಗಳ ಕಾಲ ಅರ್ಜಿ ಸ್ವೀಕಾರ ಸ್ಥಗಿತಗೊಳಿಸಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡಿದೆ ಎಂದು ಅವರು ಆರೋಪಿಸಿದರು. ಶಾಲಾ ದಾಖಲಾತಿ, ಪಾಸ್‌ಪೋರ್ಟ್ ಸೇರಿದಂತೆ ವಿವಿಧ ಅಗತ್ಯಗಳಿಗೆ ಜನನ ಪ್ರಮಾಣಪತ್ರ ಬೇಕಿರುವ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾರ್ವಜನಿಕರ ಆಕ್ಷೇಪದ ಬಳಿಕ ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಿದ್ದರೂ, ತುರ್ತು ಸೇವೆ ನೀಡುವುದಿಲ್ಲ ಎಂಬ ಷರತ್ತು ವಿಧಿಸಲಾಗಿದೆ ಎಂದು ಹೇಳಿದರು.

"ಒಂದು ತಿಂಗಳು ಜನನ-ಮರಣ ನೋಂದಣಿ ಸೇವೆ ಸ್ಥಗಿತಗೊಳಿಸುವ ಬದಲು, ತೆರಿಗೆ ವಸೂಲಿಯನ್ನೂ ನಿಲ್ಲಿಸುವುದಾಗಿ ಪಾಲಿಕೆ ಘೋಷಿಸಲಿ," ಎಂದು ವ್ಯಂಗ್ಯವಾಡಿದ ಅವರು, ಪಾಲಿಕೆಯ ಆಡಳಿತದಿಂದ ಸಾರ್ವಜನಿಕರು ಪ್ರತಿದಿನ ಕಚೇರಿ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ಈ ಅವ್ಯವಸ್ಥೆ ತಕ್ಷಣ ಸರಿಪಡಿಸಿ ಜನರ ಕೆಲಸಗಳು ಸುಗಮವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಭೂಪರಿವರ್ತನೆ ಪ್ರಕ್ರಿಯೆಯಲ್ಲೂ ಗಂಭೀರ ಗೊಂದಲ ಉಂಟಾಗಿದೆ ಎಂದು ಶಾಸಕರು ಆರೋಪಿಸಿದರು. ಈ ಹಿಂದೆ ಕಂದಾಯ ಇಲಾಖೆಯ ಮೂಲಕ ನಡೆಯುತ್ತಿದ್ದ ಕನ್ವರ್ಷನ್ ಪ್ರಕ್ರಿಯೆಯನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ವರ್ಗಾಯಿಸಿರುವ ರಾಜ್ಯ ಸರ್ಕಾರ, ಅಗತ್ಯ ಸಿಬ್ಬಂದಿ ಹಾಗೂ ವ್ಯವಸ್ಥೆ ಕಲ್ಪಿಸದೇ ನಿರ್ಧಾರ ಕೈಗೊಂಡ ಪರಿಣಾಮ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಸರ್ವೇ ನಕ್ಷೆ ಇಲ್ಲದೆ ಮುಡಾ ಕನ್ವರ್ಷನ್ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದರೆ, ಕಂದಾಯ ಇಲಾಖೆ ಸರ್ಕಾರದ ಆದೇಶದ ಪ್ರಕಾರ ನಕ್ಷೆ ಸಿದ್ಧಪಡಿಸಲು ಸಾಧ್ಯವಿಲ್ಲ ಎನ್ನುತ್ತಿದೆ. ಇದರ ಪರಿಣಾಮ ಆಸ್ತಿ ಖರೀದಿ-ಮಾರಾಟ ಸೇರಿದಂತೆ ಹಲವು ವ್ಯವಹಾರಗಳು ಸ್ಥಗಿತಗೊಂಡಿದ್ದು, ಜನರು ತಿಂಗಳುಗಟ್ಟಲೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ ಎಂದು ಆರೋಪಿಸಿದರು.

ಪ್ರಾಪರ್ಟಿ ಕಾರ್ಡ್, ಆರ್‌ಟಿಸಿ, ಕನ್ವರ್ಷನ್ ಸೇರಿದಂತೆ ಹಲವು ಸೇವೆಗಳು ವಿಳಂಬವಾಗುತ್ತಿದ್ದು, ಸರ್ವರ್ ಸಮಸ್ಯೆ ಮತ್ತು ತಾಂತ್ರಿಕ ದೋಷಗಳಿಂದ ಸಾರ್ವಜನಿಕರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ರಾಜ್ಯ ಸರ್ಕಾರ ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸಿ, ಜನರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ ಹಾಗೂ ಮಂಡಲ ಪದಾಧಿಕಾರಿ ಮಂಗಳಾ ಆಚಾರ್ ಉಪಸ್ಥಿತರಿದ್ದರು.

Post a Comment

Previous Post Next Post