ಪುತ್ತೂರು, ಜುಲೈ 8: ಕಂಬಳ ಕ್ಷೇತ್ರದ ಹೆಸರಾಂತ ವೀಕ್ಷಕ ವಿವರಣೆಗಾರ, ಕಾಂಗ್ರೆಸ್ ಮುಖಂಡ ಹಾಗೂ ಪುತ್ತೂರು ಭೂನ್ಯಾಯ ಮಂಡಳಿ ಸದಸ್ಯ ನಿರಂಜನ್ ರೈ ಮಠಂತಬೆಟ್ಟು (60) ಅವರು ಬುಧವಾರ ಹೃದಯಾಘಾತದಿಂದ ನಿಧನರಾದರು.
ಪುತ್ತೂರಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಭೂನ್ಯಾಯ ಮಂಡಳಿಯ ಕಲಾಪದಲ್ಲಿ ಭಾಗವಹಿಸಿದ್ದ ವೇಳೆ ಅವರಿಗೆ ಏಕಾಏಕಿ ತೀವ್ರ ಹೃದಯಾಘಾತ ಸಂಭವಿಸಿತು. ತಕ್ಷಣ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ವೈದ್ಯರ ಪ್ರಯತ್ನ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ಕಂಬಳ ಲೋಕದಲ್ಲಿ ನಿರಂಜನ್ ರೈ ಮಠಂತಬೆಟ್ಟು ಅವರು ತಮ್ಮ ವಿಶಿಷ್ಟ ತುಳು ವೀಕ್ಷಕ ವಿವರಣೆ, ಮನೋಜ್ಞ ನಿರೂಪಣೆ ಹಾಗೂ ಕಂಬಳದ ಬಗ್ಗೆ ಇದ್ದ ಆಳವಾದ ಜ್ಞಾನದಿಂದ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ಧ್ವನಿ ಮತ್ತು ನಿರೂಪಣಾ ಶೈಲಿ ಕಂಬಳಾಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿತ್ತು.
ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿಯೂ ಅವರು ಸಕ್ರಿಯರಾಗಿದ್ದು, ಕೋಡಿಂಬಾಡಿ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ, ಬನ್ನೂರು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಹಾಗೂ ಬಂಟರ ಸಂಘದ ಕ್ರಿಯಾಶೀಲ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಸರಳ ವ್ಯಕ್ತಿತ್ವ, ಸಜ್ಜನಿಕೆ ಮತ್ತು ಸಮಾಜಮುಖಿ ಚಟುವಟಿಕೆಗಳ ಮೂಲಕ ಜನಮನ ಗೆದ್ದಿದ್ದ ನಿರಂಜನ್ ರೈ ಮಠಂತಬೆಟ್ಟು ಅವರ ಅಗಲಿಕೆ ಕಂಬಳ ಕ್ಷೇತ್ರ, ಸಾಮಾಜಿಕ ಹಾಗೂ ರಾಜಕೀಯ ವಲಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು, ಸಾರ್ವಜನಿಕರು ಹಾಗೂ ಕಂಬಳಾಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Post a Comment