ಬಂಟ್ವಾಳ: ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೇಟಿ ಪ್ರದೇಶದಲ್ಲಿ ಬುಧವಾರ ದುರ್ಘಟನೆಯೊಂದು ಸಂಭವಿಸಿದ್ದು, ಚಲಿಸುತ್ತಿದ್ದ ಶಾಲಾ ವಾಹನದ ಮೇಲೆ ಮರ ಬಿದ್ದ ಪರಿಣಾಮ 6 ವರ್ಷದ ಬಾಲಕಿ ಮೃತಪಟ್ಟಿದ್ದು, ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಶ್ರೀ ಕಾನಲ್ತಾಯ ದೈವಸ್ಥಾನದ ಬದಿಯಲ್ಲಿ ಇದ್ದ ಮರವೊಂದು ಏಕಾಏಕಿ ಚಲಿಸುತ್ತಿದ್ದ ಶಾಲಾ ವಾಹನದ ಮೇಲೆ ಬಿದ್ದಿದೆ. ಪರಿಣಾಮ ವಾಹನದಲ್ಲಿದ್ದ ಸುಮಾರು 6 ವರ್ಷದ ಚಿರಣ್ವಿ ಎಂಬ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನೆಯಲ್ಲಿ ಗಾಯಗೊಂಡ ನಾಲ್ವರು ಮಕ್ಕಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದ ಬಗ್ಗೆ ವೈದ್ಯರು ನಿಗಾ ವಹಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಘಟನೆಯ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.
Post a Comment