ಬಲೂಚಿಸ್ತಾನದಲ್ಲಿ ಉಗ್ರರ ದಾಳಿ: 9 ಪೊಲೀಸ್ ಸಿಬ್ಬಂದಿ ಸಾವು, ಹಲವರು ನಾಪತ್ತೆ ; ಅಣೆಕಟ್ಟು ನಿರ್ಮಾಣ ಸ್ಥಳದ ಮೇಲೆ ಗುಂಡಿನ ದಾಳಿ

ಬಲೂಚಿಸ್ತಾನ್ : ಪಾಕಿಸ್ತಾನದ ನೈಋತ್ಯ ಭಾಗದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 9 ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ.

ಜಿಯಾರತ್ ಜಿಲ್ಲೆಯಲ್ಲಿರುವ ಬಹುಕೋಟಿ ರೂಪಾಯಿ ವೆಚ್ಚದ ಮಾಂಗಿ ಅಣೆಕಟ್ಟು ನಿರ್ಮಾಣ ಸ್ಥಳದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಉಪ ಆಯುಕ್ತ ಅಬ್ದುಲ್ ಕುದ್ದೂಸ್ ಅಚಕ್ಜೈ ತಿಳಿಸಿದ್ದಾರೆ. ಮೃತರಲ್ಲಿ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳೂ ಸೇರಿದ್ದಾರೆ.

ದಾಳಿಯ ಬಳಿಕ ನಾಪತ್ತೆಯಾದ ಸಿಬ್ಬಂದಿಗಾಗಿ ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿವೆ.

ಈವರೆಗೆ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ. ಆದರೆ ಇತ್ತೀಚೆಗೆ ಇದೇ ಪ್ರದೇಶದಲ್ಲಿ ನಡೆದ ಉಗ್ರವಿರೋಧಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಿ ತಾಲಿಬಾನ್ (ಟಿಟಿಪಿ) ಸಂಘಟನೆಯ 15 ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆಗಳು ನಡೆದಿದ್ದು, ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕರ್ತವ್ಯ ನಿರ್ವಹಿಸುವ ವೇಳೆ ಪ್ರಾಣ ಕಳೆದುಕೊಂಡ ಪೊಲೀಸ್ ಸಿಬ್ಬಂದಿ ರಾಷ್ಟ್ರದ ಹೆಮ್ಮೆ ಎಂದು ಅವರು ಹೇಳಿದ್ದಾರೆ.

ಕ್ವೆಟ್ಟಾ ನಗರದಲ್ಲಿನ ನೀರಿನ ಸಮಸ್ಯೆ ನಿವಾರಣೆಗೆ ನಿರ್ಮಿಸಲಾಗುತ್ತಿರುವ ಮಾಂಗಿ ಅಣೆಕಟ್ಟು ಯೋಜನೆಗೆ ಭದ್ರತೆ ಒದಗಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

Post a Comment

Previous Post Next Post