ಮಂಗಳೂರು: "ಡ್ರಗ್ಸ್ ಫ್ರೀ ಮಂಗಳೂರು" ಅಭಿಯಾನದಡಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ₹5.20 ಕೋಟಿ ಮೌಲ್ಯದ 5 ಕೆಜಿ 196 ಗ್ರಾಂ ಎಂಡಿಎಂಎ (MDMA) ಮಾದಕ ವಸ್ತುವನ್ನು ವಶಪಡಿಸಿಕೊಂಡು, ಬೆಳ್ತಂಗಡಿ ಮೂಲದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮೊಹಮ್ಮದ್ ಅಲ್ತಾಜ್ (28) ಹಾಗೂ ಮೊಹಮ್ಮದ್ ಮುಸ್ತಫಾ (28) ಎಂದು ಗುರುತಿಸಲಾಗಿದ್ದು, ಇವರು ದೆಹಲಿಯಿಂದ ಬೆಂಗಳೂರಿಗೆ ಎಂಡಿಎಂಎ ಸಾಗಾಟ ಮಾಡುತ್ತಿದ್ದ ವೇಳೆ ಬಾಗಲಕೋಟೆ ಜಿಲ್ಲೆಯ ಹುನಗುಂದದ ರಾಷ್ಟ್ರೀಯ ಹೆದ್ದಾರಿಯ ರಾಯಲ್ ಇನ್ ಲಾಡ್ಜ್‌ನಲ್ಲಿ ಸಿಸಿಬಿ ತಂಡ ದಾಳಿ ನಡೆಸಿ ಬಂಧಿಸಿದೆ.
ಈ ಕಾರ್ಯಾಚರಣೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಹಿಂದಿನ ಎಂಡಿಎಂಎ ಪ್ರಕರಣದ ತನಿಖೆಯ ಮುಂದುವರಿದ ಭಾಗವಾಗಿದೆ. ಜೂನ್ 25ರಂದು ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪದ ಮನೆಯಲ್ಲಿ ದಾಳಿ ನಡೆಸಿ 15.17 ಗ್ರಾಂ ಎಂಡಿಎಂಎ ಸಹಿತ ಅಣ್ಣಪ್ಪ ಸ್ವಾಮಿ @ ಮನು ಎಂಬಾತನನ್ನು ಬಂಧಿಸಲಾಗಿತ್ತು. ಆತನ ವಿಚಾರಣೆಯಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ಈ ಬೃಹತ್ ಕಾರ್ಯಾಚರಣೆ ನಡೆಸಲಾಗಿದೆ.
ಬಂಧಿತರಿಂದ 5.196 ಕೆಜಿ ಎಂಡಿಎಂಎ, ಒಂದು ಬ್ಯಾಗ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಮಂಗಳೂರು ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಡ್ರಗ್ಸ್ ಜಾಲದ ಇನ್ನಷ್ಟು ಕೊಂಡಿಗಳು ಬಹಿರಂಗವಾಗುವ ಸಾಧ್ಯತೆ ಇದೆ.
Post a Comment