MDMA Drug | ಮೆಲ್ಕಾರ್ ಫ್ಲೈಓವರ್ ಬಳಿ ಎಂಡಿಎಮ್ಎ ಸಾಗಾಟ ಪತ್ತೆ: ಮೂವರು ಬಂಧನ, ₹7.64 ಲಕ್ಷ ಮೌಲ್ಯದ ಮಾದಕ ವಸ್ತು ವಶ

ಬಂಟ್ವಾಳ: ಮೆಲ್ಕಾರ್ ಫ್ಲೈಓವರ್ ಸಮೀಪ ವಾಹನ ತಪಾಸಣೆ ವೇಳೆ ಎಂಡಿಎಮ್ಎ (MDMA) ಮಾದಕ ವಸ್ತು ಸಾಗಾಟ ಪತ್ತೆಯಾಗಿದ್ದು, ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.

ಜೂನ್ 4ರಂದು ಸಂಜೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರು ಠಾಣಾ ಸಿಬ್ಬಂದಿಗಳೊಂದಿಗೆ ಮೆಲ್ಕಾರ್ ಫ್ಲೈಓವರ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅನುಮಾನಾಸ್ಪದ ಕಾರೊಂದನ್ನು ನಿಲ್ಲಿಸಿ ಪರಿಶೀಲಿಸಿದರು. ಕಾರಿನಲ್ಲಿ ಚಾಲಕ ಸೇರಿ ಮೂವರು ಪ್ರಯಾಣಿಸುತ್ತಿದ್ದು, ತಪಾಸಣೆ ವೇಳೆ ಮಾದಕ ವಸ್ತು ಸೇವನೆಗೆ ಬಳಸುವ ಸಾಧನ ಪತ್ತೆಯಾಯಿತು.

ವಿಚಾರಣೆ ನಡೆಸಿದಾಗ ಆರೋಪಿಗಳನ್ನು ಬಂಟ್ವಾಳ ಪುದು ನಿವಾಸಿ ಎ. ಜುಬೈರ್ (39), ಸಜಿಪ ಮುನ್ನೂರು ನಿವಾಸಿ ಮೊಹಮ್ಮದ್ ಸವಾದ್ (36) ಹಾಗೂ ಬಿ. ಮೂಡ ನಿವಾಸಿ ಬಿ.ಎಂ. ರಶೀದ್ ಅಲಿಯಾಸ್ ಮಾರಿಮುತ್ತು ಎಂದು ಗುರುತಿಸಲಾಗಿದೆ.

ಆರೋಪಿಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಎಂಡಿಎಮ್ಎ ಮಾದಕ ವಸ್ತು ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದು, ಬಳಿಕ ನಡೆಸಿದ ತಪಾಸಣೆಯಲ್ಲಿ ಅವರ ಬಳಿಯಿಂದ ಹಾಗೂ ಕಾರಿನಿಂದ ಒಟ್ಟು 76 ಗ್ರಾಂ 40 ಮಿಲಿಗ್ರಾಂ ಎಂಡಿಎಮ್ಎ ಮಾದಕ ವಸ್ತು ಪತ್ತೆಯಾಗಿದೆ. ಇದರ ಅಂದಾಜು ಮೌಲ್ಯ ₹7,64,000 ಎಂದು ಪೊಲೀಸರು ತಿಳಿಸಿದ್ದಾರೆ.

ಇದಲ್ಲದೆ ಮಾದಕ ವಸ್ತು ಸೇವನೆಗೆ ಬಳಸುವ ಸಾಧನ, ಆರೋಪಿಗಳ ಬಳಿಯಿದ್ದ ಮೂರು ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ KA-19 MR-1997 ನೋಂದಣಿಯ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Post a Comment

Previous Post Next Post