ಮಂಗಳೂರು: ಒಡಿಶಾದ ಖೋರ್ಡಾ ನಗರದಲ್ಲಿ ನಡೆದ ವಾಕೋ ಇಂಡಿಯಾ ಜೂನಿಯರ್ ರಾಷ್ಟ್ರೀಯ ಕಿಕ್‌ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಐಕೆಎಂಎ (IKMA) ಸಂಸ್ಥೆಯ ಕ್ರೀಡಾಪಟುಗಳು ಅದ್ಭುತ ಸಾಧನೆ ಮಾಡಿ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಐಕೆಎಂಎ ಕ್ರೀಡಾಪಟುಗಳಾದ ದಿಥಿಕಾ ಜೆ.ಕೆ. ಎರಡು ಚಿನ್ನದ ಪದಕಗಳನ್ನು ಗೆದ್ದರೆ, ಗಗನಾ ಜೆ. ರಾವ್ ಒಂದು ಚಿನ್ನ ಹಾಗೂ ಒಂದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ದುಶ್ಯಂತ್ ಎರಡು ಕಂಚಿನ ಪದಕಗಳನ್ನು ಜಯಿಸಿದ್ದು, ಅತೀಶ್ ಎಸ್. ಶೆಟ್ಟಿ ಒಂದು ಬೆಳ್ಳಿ ಪದಕ ಗೆದ್ದು ರಾಜ್ಯದ ಪದಕ ಬೇಟೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ವಿಶೇಷವೆಂದರೆ, ಈ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ದೊರೆತ ಒಟ್ಟು 7 ಪದಕಗಳನ್ನೂ ಐಕೆಎಂಎ ಸಂಸ್ಥೆಯ ಕ್ರೀಡಾಪಟುಗಳೇ ಗೆದ್ದಿದ್ದಾರೆ. ಈ ಮೂಲಕ ಸಂಸ್ಥೆ ಹಾಗೂ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೊಸ ಗರಿಯನ್ನು ಸೇರಿಸಿದ್ದಾರೆ.
ಕ್ರೀಡಾಪಟುಗಳ ಈ ಸಾಧನೆಯ ಹಿಂದೆ ಸಂಸ್ಥೆಯ ಮುಖ್ಯ ಶಿಕ್ಷಕರಾದ ನಿತಿನ್ ಎನ್. ಸುವರ್ಣ ಹಾಗೂ ಹಿರಿಯ ಶಿಕ್ಷಕರಾದ ಸಂಪತ್ ಕುಮಾರ್ ಅವರ ಸಮರ್ಥ ತರಬೇತಿ ಮತ್ತು ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ ಎಂದು ಸಂಸ್ಥೆ ತಿಳಿಸಿದೆ.
ಕ್ರೀಡಾಪಟುಗಳ ಪರಿಶ್ರಮ, ಶಿಸ್ತು ಮತ್ತು ಸಮರ್ಪಣೆಯ ಫಲವಾಗಿ ಬಂದಿರುವ ಈ ಸಾಧನೆಗೆ ಕ್ರೀಡಾ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಪದಕ ವಿಜೇತರಿಗೆ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.
“ರಾಷ್ಟ್ರೀಯ ವೇದಿಕೆಯಲ್ಲಿ ಐಕೆಎಂಎ ಕ್ರೀಡಾಪಟುಗಳ ಸಾಧನೆ ಜಿಲ್ಲೆಯ ಹೆಮ್ಮೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಂತರರಾಷ್ಟ್ರೀಯ ಮಟ್ಟದ ಸಾಧನೆಗಳು ಮೂಡಿಬರಲಿ” ಎಂದು ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ.
Post a Comment