ಉಡುಪಿ: ಜಿಲ್ಲೆಯ ಬ್ರಹ್ಮಾವರ ಸಮೀಪದ ಹೇರಂಜೆಯಲ್ಲಿ ಮನಕಲಕುವ ದುರಂತವೊಂದು ಸಂಭವಿಸಿದ್ದು, ತಾಯಿಯ ಕಂಕುಳಲ್ಲಿದ್ದ ಒಂದೂವರೆ ವರ್ಷದ ಗಂಡು ಮಗು ತೆಂಗಿನಕಾಯಿ ಬಿದ್ದು ಸಾವನ್ನಪ್ಪಿದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಬ್ರಹ್ಮಾವರದಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿರುವ ಪ್ರಶಾಂತ್ ಹಾಗೂ ಸುಚಿತ್ರಾ ದಂಪತಿಯ ಪುತ್ರ ಈ ದುರ್ಘಟನೆಗೆ ಬಲಿಯಾಗಿದ್ದಾನೆ.
ಮಂಗಳವಾರ ಬೆಳಿಗ್ಗೆ ಸುಚಿತ್ರಾ ಅವರು ತಮ್ಮ ಆರು ವರ್ಷದ ಮಗಳನ್ನು ಶಾಲೆಗೆ ಕರೆದೊಯ್ಯಲು ಮನೆಯಿಂದ ಹೊರಟಿದ್ದರು. ಮಳೆ ನಿಂತಿದ್ದ ಕಾರಣ ಚಿಕ್ಕ ಮಗುವನ್ನೂ ಕಂಕುಳಲ್ಲಿ ಎತ್ತಿಕೊಂಡು ಸಾಗುತ್ತಿದ್ದ ವೇಳೆ, ರಸ್ತೆ ಬದಿಯ ತೋಟದಲ್ಲಿದ್ದ ತೆಂಗಿನ ಮರದಿಂದ ಏಕಾಏಕಿ ತೆಂಗಿನಕಾಯಿಯೊಂದು ಉದುರಿ ಮಗುವಿನ ತಲೆಗೆ ಬಲವಾಗಿ ಅಪ್ಪಳಿಸಿದೆ.
ಅಪಘಾತದ ತೀವ್ರತೆಗೆ ಮಗುವಿನ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಲು ಹರಸಾಹಸ ಪಟ್ಟರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಸಂಜೆಯ ವೇಳೆಗೆ ಕೊನೆಯುಸಿರೆಳೆದಿದೆ.
ಅನಿರೀಕ್ಷಿತವಾಗಿ ಸಂಭವಿಸಿದ ಈ ದುರಂತದಿಂದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಪ್ರದೇಶವೇ ಶೋಕದಲ್ಲಿ ಮುಳುಗಿದೆ. ಅಪರೂಪದ ಈ ಘಟನೆ ಸ್ಥಳೀಯರಲ್ಲೂ ತೀವ್ರ ನೋವು ಮತ್ತು ದುಃಖವನ್ನುಂಟು ಮಾಡಿದೆ.
Post a Comment