ಉಡುಪಿ : ತಮಿಳುನಾಡಿನ ಜನಪ್ರಿಯ ನಟ-ರಾಜಕಾರಣಿ ಹಾಗೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಜೂನ್ 12ರಂದು ಮೊದಲ ಬಾರಿಗೆ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಈ ಭಕ್ತಿಯಾತ್ರೆ ರಾಜಕೀಯ ಹಾಗೂ ಸಿನಿ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ರಾಜಕೀಯ ಬದುಕಿನ ಮಹತ್ವದ ಘಟ್ಟದಲ್ಲಿರುವ ವಿಜಯ್, ಶುಕ್ರವಾರ ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಧ್ಯಾಹ್ನ ಕೊಲ್ಲೂರಿಗೆ ತಲುಪಿ ಶ್ರೀ ಮೂಕಾಂಬಿಕೆ ದೇವಿಯ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮಂಗಳೂರಿನಿಂದ ಚೆನ್ನೈಗೆ ತೆರಳಲಿದ್ದಾರೆ.
ದಕ್ಷಿಣ ಭಾರತದ ಪ್ರಭಾವಿ ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರು ಹಾಗೂ ಲಕ್ಷಾಂತರ ಭಕ್ತರ ನಂಬಿಕೆಯ ಕೇಂದ್ರವಾಗಿರುವ ಕೊಲ್ಲೂರು ಮೂಕಾಂಬಿಕೆ ಕ್ಷೇತ್ರಕ್ಕೆ ವಿಜಯ್ ಆಗಮಿಸುತ್ತಿರುವುದು ವಿಶೇಷ ಗಮನ ಸೆಳೆದಿದೆ. ಎಂಜಿಆರ್, ಜಯಲಲಿತಾ ಸೇರಿದಂತೆ ಅನೇಕ ರಾಜಕೀಯ ದಿಗ್ಗಜರು ತಮ್ಮ ಜೀವನದ ಮಹತ್ವದ ಸಂದರ್ಭಗಳಲ್ಲಿ ಮೂಕಾಂಬಿಕೆ ದೇವಿಯ ಆಶೀರ್ವಾದ ಪಡೆದಿದ್ದರು.
ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯದ ನಡುವೆ ನೆಲೆಸಿರುವ ಈ ಪವಿತ್ರ ಕ್ಷೇತ್ರವು ಪರಶುರಾಮ ಕ್ಷೇತ್ರದ ಏಳು ಮುಕ್ತಿ ಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ ಶಕ್ತಿಪೀಠದಲ್ಲಿ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಯ ಐಕ್ಯಸ್ವರೂಪಿಣಿಯಾಗಿ ಶ್ರೀ ಮೂಕಾಂಬಿಕೆ ದೇವಿಯನ್ನು ಆರಾಧಿಸಲಾಗುತ್ತದೆ.
ಜ್ಞಾನ, ಐಶ್ವರ್ಯ ಮತ್ತು ಯಶಸ್ಸಿನ ವರಪ್ರದಾತೆಯೆಂದು ಭಕ್ತರು ನಂಬುವ ಮೂಕಾಂಬಿಕೆ ದೇವಿಯ ಸನ್ನಿಧಿಗೆ ಮುಖ್ಯಮಂತ್ರಿ ವಿಜಯ್ ಅವರ ಭೇಟಿ ಇದೀಗ ಭಕ್ತರಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಹೊಸ ಕುತೂಹಲ ಮೂಡಿಸಿದೆ.
ವಿಜಯ್ ಅವರ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಅಗತ್ಯ ಭದ್ರತಾ ಮತ್ತು ವ್ಯವಸ್ಥಾಪನಾ ಸಿದ್ಧತೆಗಳನ್ನು ಕೈಗೊಂಡಿವೆ.
Post a Comment