ಕರಾವಳಿಯ ನಟಿ ಶುಭಾ ಪೂಂಜಾ ದಾಂಪತ್ಯಕ್ಕೆ ಅಂತ್ಯ? ; ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕೆ ಕೋರ್ಟ್ ಮೊರೆ

ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಹಾಗೂ ‘ಬಿಗ್ ಬಾಸ್’ ಖ್ಯಾತಿಯ ಶುಭಾ ಪೂಂಜಾ ಅವರ ವೈವಾಹಿಕ ಜೀವನದ ಬಗ್ಗೆ ಹೊಸ ಬೆಳವಣಿಗೆಯೊಂದು ಬೆಳಕಿಗೆ ಬಂದಿದೆ. ಶುಭಾ ಪೂಂಜಾ ಮತ್ತು ಅವರ ಪತಿ ಉದ್ಯಮಿ ಸುಮಂತ್ ಬಿಲ್ಲವ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್‌ಗೆ ಜಂಟಿ ಅರ್ಜಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.

2022ರ ಜನವರಿಯಲ್ಲಿ ಪ್ರೀತಿಸಿ ವಿವಾಹವಾಗಿದ್ದ ಈ ಜೋಡಿ, ಕಳೆದ ನಾಲ್ಕು ವರ್ಷಗಳಿಂದ ಸಂತೋಷದ ಜೀವನ ನಡೆಸುತ್ತಿರುವಂತೆ ಕಂಡುಬಂದಿತ್ತು. ಆದರೆ ಇದೀಗ ಇಬ್ಬರೂ ದಾಂಪತ್ಯ ಜೀವನಕ್ಕೆ ತೆರೆ ಎಳೆಯಲು ನಿರ್ಧರಿಸಿರುವ ಸುದ್ದಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಮೂಲಗಳ ಪ್ರಕಾರ, ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕಾಗಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮುಂದಿನ ದಿನಗಳಲ್ಲಿ ನಡೆಯಲಿದ್ದು, ಆ ವೇಳೆ ಶುಭಾ ಪೂಂಜಾ ಹಾಗೂ ಸುಮಂತ್ ಬಿಲ್ಲವ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇದೆ. ಆದರೆ ವಿಚ್ಛೇದನಕ್ಕೆ ಕಾರಣವೇನು ಎಂಬ ಬಗ್ಗೆ ಇಬ್ಬರೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈ ನಡುವೆ, ಶುಭಾ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಿಂದ ಪತಿ ಜೊತೆಯಲ್ಲಿದ್ದ ಕೆಲವು ಫೋಟೋಗಳನ್ನು ತೆಗೆದುಹಾಕಿರುವುದು ಗಮನ ಸೆಳೆದಿದೆ.

‘ಮೊಗ್ಗಿನ ಮನಸು’ ಸೇರಿದಂತೆ ಹಲವು ಕನ್ನಡ ಸಿನಿಮಾಗಳ ಮೂಲಕ ಸಿನಿಪ್ರಿಯರ ಮನಗೆದ್ದಿದ್ದ ಶುಭಾ ಪೂಂಜಾ, ನಂತರ ‘ಬಿಗ್ ಬಾಸ್ ಕನ್ನಡ’ ಸೀಸನ್ 8ರಲ್ಲಿ ಭಾಗವಹಿಸಿ ಮತ್ತಷ್ಟು ಜನಪ್ರಿಯತೆ ಗಳಿಸಿದ್ದರು. ತಮ್ಮ ಸರಳತೆ, ಮುಗ್ಧತೆ ಮತ್ತು ಚುರುಕಿನ ವ್ಯಕ್ತಿತ್ವದಿಂದ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ಅವರು ಇದೀಗ ವೈಯಕ್ತಿಕ ಬದುಕಿನ ಕಾರಣದಿಂದ ಸುದ್ದಿಯಲ್ಲಿದ್ದಾರೆ.

ಈ ಬೆಳವಣಿಗೆ ಶುಭಾ ಪೂಂಜಾ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದು, ಈ ಬಗ್ಗೆ ನಟಿಯಿಂದ ಅಧಿಕೃತ ಪ್ರತಿಕ್ರಿಯೆಗಾಗಿ ಹಲವರು ಕಾಯುತ್ತಿದ್ದಾರೆ.
Previous Post Next Post