Ramalinga Reddy Resigns | ಮನವೊಲಿಕೆಗೆ ಮಣಿಯದ ರೆಡ್ಡಿ : ಡಿಕೆ ಸರ್ಕಾರಕ್ಕೆ ಮೊದಲ ಶಾಕ್ ! ಖಾತೆ ಅಸಮಾಧಾನದಿಂದ ರಾಮಲಿಂಗಾ ರೆಡ್ಡಿ ರಾಜೀನಾಮೆ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಕ್ರಿಯೆ ಪೂರ್ಣಗೊಂಡು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ತಲೆನೋವು ಎದುರಾಗಿದೆ. ಸಚಿವ ಸಂಪುಟ ರಚನೆಯ ಬಳಿಕ ಖಾತೆ ಹಂಚಿಕೆ ವಿಚಾರದಲ್ಲಿ ಉಂಟಾದ ಅಸಮಾಧಾನ ಇದೀಗ ರಾಜೀನಾಮೆ ಹಂತಕ್ಕೆ ತಲುಪಿರುವ ಮಾಹಿತಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು ನಗರಾಭಿವೃದ್ಧಿ ಖಾತೆಯ ನಿರೀಕ್ಷೆಯಲ್ಲಿದ್ದ ಹಿರಿಯ ನಾಯಕ ಹಾಗೂ ಸಚಿವ ರಾಮಲಿಂಗಾ ರೆಡ್ಡಿಗೆ ಜಲಸಂಪನ್ಮೂಲ ಖಾತೆ ನೀಡಲಾಗಿದೆ ಎನ್ನಲಾಗಿದ್ದು, ಇದರಿಂದ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದರೂ ಯಾವುದೇ ಸ್ಪಷ್ಟ ಭರವಸೆ ಸಿಗದ ಹಿನ್ನೆಲೆಯಲ್ಲಿ ರೆಡ್ಡಿ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ರಾಮಲಿಂಗಾ ರೆಡ್ಡಿ ತಮ್ಮ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ್ದು, ಯಾವುದೇ ಕ್ಷಣದಲ್ಲಿ ಅಧಿಕೃತವಾಗಿ ಸಲ್ಲಿಸುವ ಸಾಧ್ಯತೆ ಇದೆ. ಈ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ.

ಇನ್ನೊಂದೆಡೆ, ಪರಿಸ್ಥಿತಿ ತಿಳಿಯುತ್ತಿದ್ದಂತೆ ಪಕ್ಷದ ನಾಯಕರು ರೆಡ್ಡಿ ಮನವೊಲಿಕೆಗೆ ಮುಂದಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಪರವಾಗಿ ಮನೋಹರ್ ಭೇಟಿ ನೀಡಿ ರಾಜೀನಾಮೆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಆದರೆ, ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಲಕ್ಷಣಗಳನ್ನು ರೆಡ್ಡಿ ತೋರಿಸಿಲ್ಲ ಎಂದು ತಿಳಿದುಬಂದಿದೆ.

ಸುದ್ದಿಗೋಷ್ಠಿ ಸಂದರ್ಭದಲ್ಲೂ ಕೆಲ ಕಾಂಗ್ರೆಸ್ ಮುಖಂಡರು ರಾಜೀನಾಮೆ ನೀಡದಂತೆ ಮನವಿ ಮಾಡಿದರೂ, "ಈ ವಿಚಾರದಲ್ಲಿ ನಾನು ಯಾರ ಮಾತನ್ನೂ ಕೇಳುವುದಿಲ್ಲ" ಎಂದು ರಾಮಲಿಂಗಾ ರೆಡ್ಡಿ ಖಡಕ್ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸರ್ಕಾರ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಸಚಿವರ ಅಸಮಾಧಾನ ಬಹಿರಂಗವಾಗಿರುವುದು ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ಹೊಸ ಸವಾಲಾಗಿ ಪರಿಣಮಿಸಿದೆ. ಇದೀಗ ರೆಡ್ಡಿ ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದರತ್ತ ರಾಜ್ಯ ರಾಜಕೀಯದ ಚಿತ್ತ ನೆಟ್ಟಿದೆ.

Post a Comment

Previous Post Next Post