ಮಂಗಳೂರು : ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಮುಲ್ಕಿ ಪೊಲೀಸರು, ಆತನಿಂದ ಸುಮಾರು 2 ಲಕ್ಷ ರೂ. ಮೌಲ್ಯದ 4 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಅಬ್ಬಾಸ್ (50) ಎಂದು ಗುರುತಿಸಲಾಗಿದೆ. ಆತ ಉಳ್ಳಾಲ ತಾಲೂಕಿನ ಕೋಟೆಕಾರ್ ಗ್ರಾಮದ ಮುಳ್ಳುಗುಡ್ಡೆಯ ಹಿದಾಯತ್ ನಗರದ ಹಿದಾಯತ್ ಮಸೀದಿ ಸಮೀಪದ ನಿವಾಸಿಯಾಗಿದ್ದಾನೆ.
ಗುರುವಾರ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಪಣಂಬೂರು ಎಸಿಪಿ ತಂಡ ಹಾಗೂ ಮುಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು, ಆತನ ಬಳಿಯಿದ್ದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 45/2026ರಡಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(ಸಿ) ಹಾಗೂ 20(ಬಿ) ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಮಾಹಿತಿಯಂತೆ, ಬಂಧಿತ ಅಬ್ಬಾಸ್ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿವೆ. 2021ರಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಾಗಿದ್ದರೆ, 2026ರಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಮತ್ತೊಂದು ಪ್ರಕರಣವೂ ದಾಖಲಾಗಿತ್ತು.
ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಮುಲ್ಕಿ ಪೊಲೀಸರು ಮುಂದುವರಿಸಿದ್ದಾರೆ.
Tags
ಅಪರಾಧ