ರಾಮ ಮಂದಿರದ ಮೇಲೆ ಬಾಂಬ್ ದಾಳಿ ಸಂಚು? ಹರಿಹರ ಶಂಕಿತ ಉಗ್ರನ ಮೊಬೈಲ್‌ನಲ್ಲಿ ಆತಂಕಕಾರಿ ಸುಳಿವುಗಳು!


ಹರಿಹರದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರನ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ತನಿಖೆಯ ವೇಳೆ ದೇಶದ ಭದ್ರತಾ ಸಂಸ್ಥೆಗಳನ್ನೇ ಎಚ್ಚರಗೊಳಿಸುವಂತಹ ಹಲವು ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿವೆ.

ಬಂಧಿತ ಆರೋಪಿ ಸುಹೇಲ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ, ಅಯೋಧ್ಯೆಯ ರಾಮ ಮಂದಿರವನ್ನು ಬಾಂಬ್ ಸ್ಫೋಟದ ಮೂಲಕ ಗುರಿಯಾಗಿಸುವ ಉದ್ದೇಶ ಹೊಂದಿದ್ದಾನೆ ಎಂಬ ಅಂಶ ಉಲ್ಲೇಖಗೊಂಡಿದೆ. ಈ ಸಂಬಂಧ ಪಾಕಿಸ್ತಾನ ಮೂಲದ ‘ರಾಣಾ’ ಎಂಬ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದಾನೆ ಎಂಬ ಶಂಕೆಯೂ ವ್ಯಕ್ತವಾಗಿದೆ.

ಆರೋಪಿಯ ಮೊಬೈಲ್ ಫೋನ್‌ನ್ನು ವಶಕ್ಕೆ ಪಡೆದ ಪೊಲೀಸರು ಅದರ ತಾಂತ್ರಿಕ ಪರಿಶೀಲನೆ ನಡೆಸಿದಾಗ ಹಲವು ಮಹತ್ವದ ಸುಳಿವುಗಳು ಪತ್ತೆಯಾಗಿವೆ. ವಾಟ್ಸಾಪ್‌ನ ‘ಲಾಕ್‌ಡ್ ಚಾಟ್’ ವಿಭಾಗದಲ್ಲಿ ಪಾಕಿಸ್ತಾನ ಮೂಲದ ದೂರವಾಣಿ ಸಂಖ್ಯೆ ಪತ್ತೆಯಾಗಿದ್ದು, ಅದು ‘ರಾಣಾ ಜೀ’ ಎಂಬ ಹೆಸರಿನಲ್ಲಿ ಸೇವ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಇದರ ಜೊತೆಗೆ ಉರ್ದು ಮಿಶ್ರಿತ ಹಿಂದಿಯಲ್ಲಿ ನಡೆದಿರುವ ಹಲವು ಧ್ವನಿ ಸಂದೇಶಗಳು ತನಿಖಾಧಿಕಾರಿಗಳ ಗಮನ ಸೆಳೆದಿವೆ. ಅವುಗಳಲ್ಲಿ “ನಾನು ರಾಮ ಮಂದಿರವನ್ನು ಬಾಂಬ್ ಮೂಲಕ ಸ್ಫೋಟಿಸಲು ಬಯಸುತ್ತೇನೆ” ಎಂಬ ಅಂಶವಿರುವ ಆಡಿಯೋ ಕ್ಲಿಪ್ ಕೂಡ ಪತ್ತೆಯಾಗಿದೆ ಎನ್ನಲಾಗಿದೆ. ಇಂತಹ ಇನ್ನೂ ಹಲವು ಧ್ವನಿ ಸಂದೇಶಗಳ ಸತ್ಯಾಸತ್ಯತೆಯನ್ನು ತಜ್ಞರ ಮೂಲಕ ಪರಿಶೀಲಿಸಲಾಗುತ್ತಿದೆ.

ಮೊಬೈಲ್ ಪರಿಶೀಲನೆ ವೇಳೆ ಆರೋಪಿ ಹಲವು ವಾಟ್ಸಾಪ್ ಚಾನೆಲ್‌ಗಳಿಗೆ ಚಂದಾದಾರನಾಗಿದ್ದ ಸಂಗತಿಯೂ ಬೆಳಕಿಗೆ ಬಂದಿದೆ. ಆ ಚಾನೆಲ್‌ಗಳಲ್ಲಿ ಶಸ್ತ್ರಾಸ್ತ್ರ ಹಿಡಿದಿರುವ ವ್ಯಕ್ತಿಗಳ ಚಿತ್ರಗಳು, ಉಗ್ರ ಚಟುವಟಿಕೆಗಳಿಗೆ ಹೋಲುವ ದೃಶ್ಯಗಳು ಹಾಗೂ ಅನುಮಾನಾಸ್ಪದ ವಿಷಯಗಳು ಕಂಡುಬಂದಿವೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 113(3) ಮತ್ತು 197(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿರುವ ಶಂಕೆಯ ಹಿನ್ನೆಲೆಯಲ್ಲಿ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಹೆಚ್.ಟಿ. ಶೇಖರ್, “ಸುಮಾರು 15 ದಿನಗಳ ಹಿಂದೆ ಆರೋಪಿ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸಕ್ಕಾಗಿ ಹರಿಹರಕ್ಕೆ ಬಂದಿದ್ದ. ಕಾರ್ಖಾನೆ ಸಮೀಪದ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಆತನ ಅನುಮಾನಾಸ್ಪದ ಚಲನವಲನಗಳ ಕುರಿತು ಮಾಹಿತಿ ಲಭ್ಯವಾದ ಬಳಿಕ ವಿಚಾರಣೆ ನಡೆಸಲಾಯಿತು. ಮೊಬೈಲ್ ಪರಿಶೀಲನೆಯಿಂದ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ” ಎಂದು ತಿಳಿಸಿದ್ದಾರೆ.

ಆರೋಪಿ ಸಂಪರ್ಕದಲ್ಲಿದ್ದವರು ಯಾರು, ವಿದೇಶಿ ಸಂಪರ್ಕಗಳಿವೆಯೇ ಹಾಗೂ ಯಾವುದೇ ಸಂಘಟಿತ ಜಾಲದ ಭಾಗವಾಗಿದ್ದಾನೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

Previous Post Next Post