ಸಲಿಂಗಕಾಮದ ವಿಡಿಯೋ ಮುಂದಿಟ್ಟು ಉದ್ಯಮಿಯಿಂದ ₹2.77 ಕೋಟಿ ಗುಳುಂ ; ಹೈಟೆಕ್ ಹನಿಟ್ರ್ಯಾಪ್ ಜಾಲ ಬಯಲು?; ಯುವ ಕಾಂಗ್ರೆಸ್ ಮುಖಂಡ ಸೇರಿ ಇಬ್ಬರ ಬಂಧನ

ಮಂಗಳೂರು : ಕರಾವಳಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್‌ಮೇಲ್ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಉದ್ಯಮಿಯೊಬ್ಬರಿಂದ ಸುಮಾರು ₹2.77 ಕೋಟಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

2024ರಲ್ಲಿ ಉದ್ಯಮಿಯೊಬ್ಬರ ಸಲಿಂಗಕಾಮದ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿದ್ದ ಜಿತೇಶ್ ಎನ್ನುವಾತ ಅವುಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿ ಆರಂಭದಲ್ಲೇ ₹35 ಲಕ್ಷ ಹಣ ಪಡೆದುಕೊಂಡಿದ್ದ ಎನ್ನಲಾಗಿದೆ.

ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಉದ್ಯಮಿ ನೆರವು ಬಯಸಿದ್ದ ಯುವ ಕಾಂಗ್ರೆಸ್ ಮುಖಂಡ ಎನ್ನಲಾದ ಇಬ್ರಾಹಿಂ ಎಂಬಾತ ಜಿತೇಶ್ ಜೊತೆಗೆ ಕೈ ಮಿಲಾಯಿಸಿ ಮತ್ತಷ್ಟು ಹಣಕ್ಕಾಗಿ ಒತ್ತಡ ಹೇರಿದ್ದು, ಸುಲಿಗೆ ಮುಂದುವರಿದಿತ್ತು ಎಂದು ಹೇಳಲಾಗಿದೆ.

ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಲು, ವಿಡಿಯೋ ಚಿತ್ರೀಕರಿಸಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಹಾಗೂ ಆತನ ಡೆತ್‌ನೋಟ್‌ನಲ್ಲಿ ಉದ್ಯಮಿಯ ಹೆಸರು ಉಲ್ಲೇಖವಾಗಿದೆ ಎಂದು ಆರೋಪಿಗಳು ನಂಬಿಸಿದ್ದರೆಂದು ತಿಳಿದುಬಂದಿದೆ. ಅಲ್ಲದೆ ನಕಲಿ ಫೋಟೋಗಳು ಹಾಗೂ ಅಂತ್ಯಸಂಸ್ಕಾರದ ದೃಶ್ಯಗಳನ್ನು ತೋರಿಸಿ ಭಯ ಹುಟ್ಟಿಸಿ ಹಣ ವಸೂಲಿ ಮಾಡಿರುವ ಆರೋಪವೂ ಕೇಳಿಬಂದಿದೆ.

ಈ ರೀತಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಉದ್ಯಮಿಯಿಂದ ಹಂತ ಹಂತವಾಗಿ ಸುಮಾರು ₹2.77 ಕೋಟಿ ಹಣ ಪಡೆದುಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ಆದರೆ ತಾನು ಸತ್ತಿದ್ದಾನೆ ಎಂದು ನಂಬಿದ್ದ ವ್ಯಕ್ತಿಯೇ ಇತ್ತೀಚೆಗೆ ಸಾರ್ವಜನಿಕವಾಗಿ ಓಡಾಡುತ್ತಿರುವುದನ್ನು ಕಂಡ ಬಳಿಕ ಉದ್ಯಮಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ.

ಬಳಿಕ ಅವರು ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಈ ಜಾಲದಲ್ಲಿ ಇನ್ನೂ ಹೆಚ್ಚಿನ ಮಂದಿ ಭಾಗಿಯಾಗಿರುವ ಸಾಧ್ಯತೆ ಇರುವುದರಿಂದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

Post a Comment

Previous Post Next Post