ಖ್ಯಾತ ಪತ್ರಿಕೋದ್ಯಮಿ ಹಾಗೂ ಕೈಗಾರಿಕಾ ಕ್ಷೇತ್ರದ ಅಗ್ರಗಣ್ಯರಾದ ದಿ.ವಿ.ಎಸ್. ಕುಡ್ವರ 127ನೇ ಜನ್ಮ ದಿನಾಚರಣೆ

ಮಂಗಳೂರು(www.mooladhwani.in) ಖ್ಯಾತ ಪತ್ರಿಕೋದ್ಯಮಿ, ನವಭಾರತ ಕನ್ನಡ ದೈನಿಕದ ಸ್ಥಾಪಕ ಸಂಪಾದಕ ಹಾಗೂ ಮರೋಳಿಯ ಕೆನರಾ ವರ್ಕ್‌ಶಾಪ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ದಿವಂಗತ ವಿ.ಎಸ್. ಕುಡ್ವ ಅವರ 127ನೇ ಜನ್ಮ ದಿನಾಚರಣೆಯನ್ನು (ಸಂಸ್ಥಾಪಕರ ದಿನಾಚರಣೆ) ಮಂಗಳವಾರ ಕೆನರಾ ವರ್ಕ್‌ಶಾಪ್ ಕೈಗಾರಿಕಾ ಸಂಕೀರ್ಣದಲ್ಲಿ ಗೌರವಪೂರ್ವಕವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಪ್ರೇಮನಾಥ ಕುಡ್ವ ವಹಿಸಿದ್ದರು. ತಮ್ಮ ಭಾಷಣದಲ್ಲಿ ಅವರು ವಿ.ಎಸ್. ಕುಡ್ವರವರ ಆಡಳಿತ ಕೌಶಲ್ಯ, ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಹಾಗೂ ಪತ್ರಿಕೋದ್ಯಮ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಅವರು ಮೂಡಿಸಿದ ಅಳಿಯದ ಛಾಪನ್ನು ಸ್ಮರಿಸಿದರು. ಅವರ ದೂರದೃಷ್ಟಿ, ಆದರ್ಶ ಮತ್ತು ಕಾರ್ಯಪದ್ಧತಿ ಇಂದಿಗೂ ಸಂಸ್ಥೆಯ ಬೆಳವಣಿಗೆಗೆ ಮಾರ್ಗದರ್ಶಕವಾಗಿದ್ದು, ಸಿಬ್ಬಂದಿಗೆ ಪ್ರೇರಣೆಯ ಮೂಲವಾಗಿದೆ ಎಂದು ಹೇಳಿದರು. ಬಳಿಕ ಸಂಸ್ಥಾಪಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ‘ದಿ. ವಿ.ಎಸ್. ಕುಡ್ವ ಜೀವನ ಚರಿತ್ರೆ’ ಕೃತಿಯ ಲೇಖಕ ವಸಂತ ಮಲ್ಯ ಅವರು ಕುಡ್ವರವರ ಬಹುಮುಖ ಸಾಧನೆಗಳನ್ನು ನೆನಪಿಸಿಕೊಂಡು ನುಡಿನಮನ ಸಲ್ಲಿಸಿದರು. ಗೌರವ ಅತಿಥಿಗಳಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಡಿಯಾಲ್‌ಬೈಲ್ ಶಾಖೆಯ ಮುಖ್ಯ ಪ್ರಬಂಧಕ ಮಿಲನ್ ಗಿರಿ ಹಾಗೂ ಕೆನರಾ ಬ್ಯಾಂಕ್, ಕುಲಶೇಖರ ಶಾಖೆಯ ಪ್ರಬಂಧಕ ಅಮಲ್ ಮೋಹನ್ ಉಪಸ್ಥಿತರಿದ್ದರು.

ಸಂಸ್ಥೆಯ ನಿವೃತ್ತ ಉಪ ಮಹಾಪ್ರಬಂಧಕ ಅಬ್ದುಲ್ ಸಲೀಂ ಮಾತನಾಡಿ, ಕಳೆದ ಎಂಟು ದಶಕಗಳಲ್ಲಿ ಕೆನರಾ ವರ್ಕ್‌ಶಾಪ್ ಸಂಸ್ಥೆ ಸಾಧಿಸಿದ ಪ್ರಗತಿಯ ಪಥವನ್ನು ವಿವರಿಸಿದರು. ಕೈಗಾರಿಕೋದ್ಯಮದಲ್ಲಿ ವಿ.ಎಸ್. ಕುಡ್ವರವರು ತೋರಿದ ಧೈರ್ಯ, ಯೋಜನಾಶಕ್ತಿ ಮತ್ತು ದೂರದರ್ಶಿತ್ವವೇ ಸಂಸ್ಥೆಯ ಯಶಸ್ಸಿನ ಅಡಿಪಾಯವಾಗಿತ್ತು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿ.ಎಸ್. ಕುಡ್ವ ಕಂಪ್ಯೂಟರ್ ಅಕಾಡೆಮಿಯ ಮುಖ್ಯ ತರಬೇತುದಾರ ಕೆ. ಮುಕುಂದರಾಜ ಪೈ ಅವರನ್ನು ಸನ್ಮಾನಿಸಲಾಯಿತು. ಸಿಬ್ಬಂದಿಗಳ ಪರವಾಗಿ ಅಕ್ಷಯ್ ಪ್ರಭು, ಹಿರಿಯ ಕಾರ್ಮಿಕರಾದ ಜಗದೀಶ್ ಸಾಲ್ಯಾನ್ ಹಾಗೂ ನಾಗರಾಜ್, ಕಾರ್ಮಿಕ ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವರು ಸಂಸ್ಥಾಪಕರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ಕಾರ್ಯನಿರ್ವಹಣಾ ಪ್ರಬಂಧಕ ಕಾವ್ಯ ಪಿ. ಕುಡ್ವ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಕಿರಣ್ ಎಸ್. ಕುಲಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುದರ್ಶನ್ ರಾವ್ ವಂದಿಸಿದರು.

Post a Comment

Previous Post Next Post