Dharwad : ಧಾರವಾಡ ಹೊರವಲಯದಲ್ಲಿ ಬೌದ್ಧ ಸನ್ಯಾಸಿಯ ಬರ್ಬರ ಹತ್ಯೆ; ಅಪಘಾತವೆಂದು ಭಾವಿಸಿದ್ದ ಪ್ರಕರಣ ಕೊಲೆ ಎಂದು ಬಹಿರಂಗ

ಧಾರವಾಡ: ನಗರದ ಹೊರವಲಯದಲ್ಲಿ ಟಿಬೆಟಿಯನ್ ಮೂಲದ ಬೌದ್ಧ ಸನ್ಯಾಸಿಯೊಬ್ಬರ ಶವ ಪತ್ತೆಯಾಗಿದ್ದು, ಮೊದಲಿಗೆ ಅಪಘಾತವೆಂದು ಅನುಮಾನಿಸಿದ್ದ ಪ್ರಕರಣ ಈಗ ಕೊಲೆ ಎಂದು ಬಹಿರಂಗವಾಗಿದೆ.

ಧಾರವಾಡ ಹೊರವಲಯದ ಹಳಿಯಾಳ ರಸ್ತೆಯಲ್ಲಿ 39 ವರ್ಷದ ತಾಶಿ ಧೋಂಡು ಎಂಬ ಬೌದ್ಧ ಸನ್ಯಾಸಿ ಮೃತದೇಹ ಪತ್ತೆಯಾಗಿದೆ. ರಸ್ತೆ ಪಕ್ಕ ಶವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಆರಂಭದಲ್ಲಿ ರಸ್ತೆ ಅಪಘಾತದಿಂದ ಸಾವನ್ನಪ್ಪಿರಬಹುದು ಎಂದು ಭಾವಿಸಿದ್ದರು. ಆದರೆ ಬಳಿಕ ಶವವನ್ನು ಆಸ್ಪತ್ರೆಗೆ ರವಾನಿಸಿ ಪರಿಶೀಲನೆ ನಡೆಸಿದಾಗ ಇದು ಹತ್ಯೆ ಎಂಬುದು ದೃಢಪಟ್ಟಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ತಾಶಿ ಧೋಂಡುವರನ್ನು ಬೇರೆಡೆ ಕೊಲೆ ಮಾಡಿ ನಂತರ ಶವವನ್ನು ಹಳಿಯಾಳ ರಸ್ತೆಗೆ ತಂದು ಎಸೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಮೃತ ತಾಶಿ ಧೋಂಡು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನವರು ಎಂದು ತಿಳಿದುಬಂದಿದೆ.
ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆಗೆ ಕಾರಣವೇನು, ಆರೋಪಿಗಳು ಯಾರು ಮತ್ತು ಮೃತರ ಹಿನ್ನೆಲೆ ಏನು ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Post a Comment

Previous Post Next Post