Car Accident : ಭೀಕರ ಕಾರು ಅಪಘಾತ ; ಪ್ರೀ ವೆಡ್ಡಿಂಗ್ ಶೂಟ್‌ಗೆ ಹೊರಟ ವರ ದುರಂತ ಸಾವು: ಮದುವೆ ಮನೆಗಳಲ್ಲಿ ದುಃಖದ ಛಾಯೆ

ಹಾಸನ: ಮದುವೆಗೆ ದಿನಾಂಕ ನಿಗದಿಯಾಗಿದ್ದ ವರ, ಪ್ರೀ ವೆಡ್ಡಿಂಗ್ ಫೋಟೋಶೂಟ್‌ಗಾಗಿ ವಧುವನ್ನು ಕರೆತರಲು ತೆರಳುತ್ತಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಸುನೀಗಿದ ದುರ್ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನು ಮನು ಎಲ್.ಎನ್. (29) ಎಂದು ಗುರುತಿಸಲಾಗಿದೆ. ಅವರು ಬೇಲೂರು ತಾಲೂಕಿನ ಲಕ್ಕುಂದ ಗ್ರಾಮದ ದರ್ಬಾರ್ ಪೇಟೆ ನಿವಾಸಿಯಾಗಿದ್ದರು. ಮೇ.10ರಂದು ಆಲೂರು ತಾಲೂಕಿನ ತೊಗರನಹಳ್ಳಿ ಗ್ರಾಮದ ಕಾಂಚನಾ ಅವರೊಂದಿಗೆ ಮದುವೆ ನಿಗದಿಯಾಗಿತ್ತು. 
ಆಲೂರು-ಬೈರಾಪುರ ರಸ್ತೆಯಲ್ಲಿರುವ ಶ್ರೀ ವೀರಶೈವ ಕಲ್ಯಾಣ ಮಂಟಪದಲ್ಲಿ ವಿವಾಹ ಕಾರ್ಯಕ್ರಮ ನಡೆಯಬೇಕಿತ್ತು.

ಮದುವೆ ಸಂಭ್ರಮದಲ್ಲಿ ತೊಡಗಿದ್ದ ಎರಡೂ ಕುಟುಂಬಗಳಿಗೆ ಈ ಘಟನೆ ಆಘಾತ ತಂದಿದೆ. ಇಂದು ಬೆಳಿಗ್ಗೆ ಮನು ಅವರು ತಮ್ಮ ವಿಟಾರಾ ಬ್ರಿಜಾ ಕಾರಿನಲ್ಲಿ ವಧುವನ್ನು ಕರೆತರಲು ಹೊರಟಿದ್ದರು.

ಮೂಗಲಿ ಗ್ರಾಮದ ಸಮೀಪ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಮನು ಅವರು ಸ್ಥಳದಲ್ಲೇ ಸಾವನ್ನಪ್ಪಿದರು.

ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Previous Post Next Post