ಸುರತ್ಕಲ್ : ಪ್ರೇಮದ ನೆಪದಲ್ಲಿ ಮೋಸ? ಗರ್ಭಿಣಿಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೋ, ಅತ್ಯಾಚಾರ ಪ್ರಕರಣ ದಾಖಲು

ಮಂಗಳೂರು : ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಟಿಪಳ್ಳ 3ನೇ ಬ್ಲಾಕ್‌ನಲ್ಲಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

ಕಾಟಿಪಳ್ಳ ನಿವಾಸಿ ನಿಷಾ ಡಿಸೋಜ (ಹೆಸರು ಬದಲಿಸಲಾಗಿದೆ) (17) ಮೃತ ವಿದ್ಯಾರ್ಥಿನಿ. ಸ್ಥಳೀಯ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಆಕೆ ಗುರುವಾರ ಸಂಜೆ ಕಾಲೇಜಿನಿಂದ ಮನೆಗೆ ಬಂದ ಬಳಿಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಭವಿಸಿದ ವೇಳೆ ಆಕೆಯ ತಾಯಿ ಮನೆಯಲ್ಲೇ ಇದ್ದು ಹೊರಗಡೆ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ವಿದ್ಯಾರ್ಥಿನಿ ಬರೆದಿರುವ ಡೆತ್ ನೋಟ್‌ನಲ್ಲಿ, "ನಾನು ತಪ್ಪು ಮಾಡಿದ್ದೇನೆ ಅಮ್ಮಾ, ನನ್ನ ತಪ್ಪನ್ನು ಮನ್ನಿಸಿ. ಇನ್ನು ಬದುಕಲು ಸಾಧ್ಯವಿಲ್ಲ. ನನಗೆ ಹಿಂದೂ ಸಂಘಟನೆಯವರು ಸಹಾಯ ಮಾಡಲಿಲ್ಲ. ನನಗೆ ಮೋಸ ಮಾಡಿ ಅವನು ಆರಾಮವಾಗಿದ್ದಾನೆ. ನಾನು ನಂಬಿದವರು ನನಗೆ ಕೈಕೊಟ್ಟಿದ್ದಾರೆ. ಸಂಘಟನೆಯಲ್ಲಿದ್ದೂ ನನಗೆ ಸಹಾಯ ಸಿಗಲಿಲ್ಲ. ನನ್ನ ರೀತಿಯಲ್ಲಿ ಯಾರ ಜೀವನವೂ ಹಾಳಾಗಬಾರದು. ನನ್ನೊಂದಿಗೆ ದೈವ, ದೇವರು ಯಾರೂ ಇಲ್ಲ. ಸಾರಿ ಅಮ್ಮಾ" ಎಂದು ತುಳು ಭಾಷೆಯಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ.

ವಿದ್ಯಾರ್ಥಿನಿಗೆ ಸ್ಥಳೀಯ ಯುವಕನೊಬ್ಬ ಪ್ರೀತಿಯ ನೆಪದಲ್ಲಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗುವಂತೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೃತಳ ತಂದೆ ರಾತ್ರಿ ಸುಮಾರು 11 ಗಂಟೆಗೆ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮ್ಮ ಪುತ್ರಿಯ ಆತ್ಮಹತ್ಯೆಗೆ ಅನೀಶ್ ಪೂಜಾರಿ ಎಂಬಾತನೇ ಕಾರಣ ಎಂದು ಆರೋಪಿಸಿದ್ದಾರೆ.

ದೂರಿನ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅನೀಶ್ ಪೂಜಾರಿ ವಿರುದ್ಧ ಪೋಕ್ಸೋ ಕಾಯ್ದೆ, ಅತ್ಯಾಚಾರ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಶುಕ್ರವಾರ ಮುಂಜಾನೆ ಸುಮಾರು 1 ಗಂಟೆಗೆ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ವಿಶೇಷ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ.

ಮೃತದೇಹದ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಗರ್ಭದಲ್ಲಿದ್ದ ಭ್ರೂಣವನ್ನು ಡಿಎನ್‌ಎ ಪರೀಕ್ಷೆಗಾಗಿ ವೈದ್ಯರು ಸಂಗ್ರಹಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Previous Post Next Post