ಬಂಧಗಳಿಗಿಂತ ಮಿಗಿಲಾದ ಮಾನವೀಯತೆ: ಧರ್ಮದ ಗಡಿ ಮೀರಿ ಅಂತಿಮ ಯಾತ್ರೆಗೆ ಹೆಗಲು ನೀಡಿದ ಮಹಿಳೆ

ಕಾಸರಗೋಡು: ಕೆಲವೊಮ್ಮೆ ರಕ್ತಸಂಬಂಧಗಳು ದೂರ ಸರಿದಾಗ, ಮಾನವೀಯತೆಯೇ ಅತಿ ದೊಡ್ಡ ಬಂಧವಾಗಿ ನಿಲ್ಲುತ್ತದೆ. ಅಂತಹ ಹೃದಯಸ್ಪರ್ಶಿ ಘಟನೆಯೊಂದು ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ನಡೆದಿದೆ. ಕುಟುಂಬದವರು ದೂರವಾದ ವ್ಯಕ್ತಿಯ ಅಂತಿಮ ಯಾತ್ರೆಯನ್ನು ಮುಸ್ಲಿಂ ಸಮುದಾಯದ ಮಹಿಳಾ ನಾಯಕಿಯೊಬ್ಬರು ಹಿಂದೂ ಸಂಪ್ರದಾಯದಂತೆ ಗೌರವಯುತವಾಗಿ ನೆರವೇರಿಸಿ ಧಾರ್ಮಿಕ ಸೌಹಾರ್ದದ ಅಪರೂಪದ ಸಂದೇಶ ಸಾರಿದ್ದಾರೆ.

ಮಂಜೇಶ್ವರದ ಚಿಗುರುಪಾದೆ ನಿವಾಸಿ 64 ವರ್ಷದ ನಾರಾಯಣನ್ ತೊಟ್ಟಥೋಡಿ ಅವರು ದೀರ್ಘಕಾಲದಿಂದ ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅನಾರೋಗ್ಯ ತೀವ್ರಗೊಂಡ ಬಳಿಕ ಅವರು ಅಸಹಾಯಕರಾಗಿ ಬದುಕು ಸಾಗಿಸುತ್ತಿದ್ದ ಮಾಹಿತಿ ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಸಮಾಜ ಸೇವಕಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ ಇಕ್ಬಾಲ್ ಅವರಿಗೆ ತಲುಪಿತ್ತು. ತಕ್ಷಣ ಸ್ಪಂದಿಸಿದ ಅವರು ನಾರಾಯಣನ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಸಿಗುವಂತೆ ನೋಡಿಕೊಂಡಿದ್ದರು.

ಆದರೆ ಆರೋಗ್ಯ ಸ್ಥಿತಿ ಹದಗೆಟ್ಟು ಅವರು ಕೊನೆಯುಸಿರೆಳೆದ ಬಳಿಕವೂ ಪರಿಸ್ಥಿತಿ ಬದಲಾಗಲಿಲ್ಲ. ಪೊಲೀಸರು ಮಾಹಿತಿ ನೀಡಿದರೂ ಕುಟುಂಬದವರು ಮೃತದೇಹವನ್ನು ಸ್ವೀಕರಿಸಲು ಮುಂದೆ ಬರಲಿಲ್ಲ. ಅಂತಿಮವಾಗಿ ಕಾನೂನುಬದ್ಧ ಒಪ್ಪಿಗೆಯೊಂದಿಗೆ ಅಂತ್ಯಕ್ರಿಯೆಯ ಜವಾಬ್ದಾರಿಯನ್ನು ಇರ್ಫಾನಾ ಇಕ್ಬಾಲ್ ಅವರು ವಹಿಸಿಕೊಂಡರು.

ಉಪ್ಪಳದ ಸಾರ್ವಜನಿಕ ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದ ವಿಧಿವಿಧಾನಗಳನ್ನು ಗೌರವಿಸಿ, ಮಗಳ ಸ್ಥಾನದಲ್ಲಿ ನಿಂತು ಚಿತೆಗೆ ಕೊಳ್ಳಿ ಇಟ್ಟು ನಾರಾಯಣನ್ ಅವರಿಗೆ ಅಂತಿಮ ವಿದಾಯ ಸಲ್ಲಿಸಿದರು. ಅವರ ಈ ನಡೆ ಧರ್ಮ, ರಾಜಕೀಯ ಮತ್ತು ಜಾತಿಯ ಎಲ್ಲ ಬೇಲಿಗಳನ್ನು ಮೀರಿ, "ಮಾನವೀಯತೆಯೇ ಎಲ್ಲಕ್ಕಿಂತ ದೊಡ್ಡ ಧರ್ಮ" ಎಂಬ ಸಂದೇಶವನ್ನು ಮತ್ತೊಮ್ಮೆ ಸಮಾಜಕ್ಕೆ ನೆನಪಿಸಿದೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಇರ್ಫಾನಾ ಇಕ್ಬಾಲ್ ಅವರ ಮಾನವೀಯ ಕಾರ್ಯಕ್ಕೆ ವಿವಿಧ ವಲಯಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Previous Post Next Post