ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳದ ಪಾಲಕ್ಕಾಡ್ ಮೂಲದ 14 ವರ್ಷದ ಬಾಲಕಿ ಶ್ರೀನಂದಾ ಅವರ ಮೃತದೇಹ ಇಂದು (ಏಪ್ರಿಲ್ 10) ಪತ್ತೆಯಾಗಿದೆ. ಸುಮಾರು 2 ಸಾವಿರ ಅಡಿ ಆಳದ ಕಡಿದಾದ ಪ್ರಪಾತದಲ್ಲಿ ಶವ ಪತ್ತೆಯಾಗಿರುವುದು ದೃಢಪಟ್ಟಿದೆ.
ಏಪ್ರಿಲ್ 7ರಂದು ಕೇರಳದಿಂದ 40 ಜನರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದ ಶ್ರೀನಂದಾ, ದತ್ತಪೀಠ ಹಾಗೂ ಮಾಣಿಕ್ಯಧಾರಾ ದರ್ಶನದ ಬಳಿಕ ಹಠಾತ್ತಾಗಿ ಕಾಣೆಯಾಗಿದ್ದರು. ತಕ್ಷಣವೇ ಹುಡುಕಾಟ ಕಾರ್ಯ ಆರಂಭಗೊಂಡಿದ್ದು, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಎಎನ್‌ಎಫ್ ತಂಡಗಳು ಜಂಟಿಯಾಗಿ ಬೃಹತ್ ಶೋಧ ಕಾರ್ಯಾಚರಣೆ ನಡೆಸಿದ್ದವು.
ದಟ್ಟ ಅರಣ್ಯ ಪ್ರದೇಶದಲ್ಲಿ ಡ್ರೋನ್ ಹಾಗೂ ಥರ್ಮಲ್ ಕ್ಯಾಮೆರಾ ಸಹಾಯದಿಂದ ಶೋಧ ಮುಂದುವರಿಸಲಾಯಿತು.
ಶುಕ್ರವಾರ ಮಧ್ಯಾಹ್ನ ಪ್ರಪಾತದ ತಳಭಾಗದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಕಾಲು ಜಾರಿ ಬಿದ್ದು ಅಪಘಾತ ಸಂಭವಿಸಿರುವ ಸಾಧ್ಯತೆ ಇದ್ದರೂ, ಇತರೆ ಯಾವುದೇ ಅನುಮಾನಾಸ್ಪದ ಅಂಶಗಳಿದ್ದೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.
ಮಗಳ ಮೃತದೇಹ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಪ್ರವಾಸಿ ತಾಣದಲ್ಲಿ ಶೋಕದ ವಾತಾವರಣ ಆವರಿಸಿದೆ. ಎರಡು ದಿನಗಳ ಕಾಲ ಮಗಳ ಪತ್ತೆಯಾಗದ ಹಿನ್ನೆಲೆ, ಅಪಹರಣದ ಶಂಕೆಯನ್ನೂ ಪೋಷಕರು ವ್ಯಕ್ತಪಡಿಸಿದ್ದರು.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Tags
ಚಿಕ್ಕಮಗಳೂರು