ಮಂಗಳೂರು: ಡಿ ಡಿ ಪ್ರೊಡಕ್ಷನ್ ಲಾಂಛನದಲ್ಲಿ ರಂಜಿತ್ ಸಿ ಬಜಾಲ್ ನಿರ್ದೇಶನ ಹಾಗೂ ಡೋಲ್ಪಿ ಡಿ ಸೋಜ ನಿರ್ಮಾಣದಲ್ಲಿ ಮೂಡಿಬಂದ “90 ಎಮ್ ಎಲ್” ತುಳು ಸಿನಿಮಾ ಶುಕ್ರವಾರ ಭಾರತ್ ಸಿನಿಮಾಸ್‌ನಲ್ಲಿ ಅದ್ದೂರಿಯಾಗಿ ತೆರೆ ಕಂಡಿತು. ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಜನಪದವು ಕೊರಗಜ್ಜ ಕ್ಷೇತ್ರದ ವಿಜಯ ಅವರು, “ತುಳುವಿನಲ್ಲಿ ಸದಭಿರುಚಿಯ ಸಿನಿಮಾಗಳು ನಿರಂತರವಾಗಿ ಬಿಡುಗಡೆಯಾಗುತ್ತಿರುವುದು ಸಂತೋಷದ ವಿಚಾರ. ‘90 ಎಮ್ ಎಲ್’ ಸಿನಿಮಾ ತುಳು ಪ್ರೇಕ್ಷಕರ ಮನಗೆದ್ದಿರಲಿ” ಎಂದು ಹಾರೈಸಿದರು.
ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, “ಸಿನಿಮಾದ ಟ್ರೈಲರ್ ಮಲಯಾಳಂ ಚಿತ್ರದ ಮಟ್ಟದಲ್ಲಿ ಕಾಣಿಸಿಕೊಂಡಿದೆ. ಟೈಟಲ್ ಕೂಡ ವಿಭಿನ್ನವಾಗಿದೆ. ಚಿತ್ರತಂಡಕ್ಕೆ ಶುಭಾಶಯಗಳು” ಎಂದರು.
ಲಾಂಚುಲಾಲ್ ಕೆ.ಎಸ್. ಅವರು, “ಟೈಟಲ್ ಹೊಸತನ ಹೊಂದಿದ್ದು, ತುಳುವರು ಸಿನಿಮಾ ನೋಡಿದರೆ ಖಂಡಿತ ಯಶಸ್ಸು ಸಿಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಟ ಅರ್ಜುನ್ ದೇವ್, “90 ಎಮ್ ಎಲ್ ನಿಜ ಜೀವನದಿಂದ ದೂರವಿರಲಿ, ಆದರೆ ಸಿನಿಮಾ ಎಲ್ಲರಿಗೂ ಹತ್ತಿರವಾಗಲಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಿರ್ಮಾಪಕ ಡೋಲ್ಪಿ ಡಿ ಸೋಜ, ಸ್ವರಾಜ್ ಶೆಟ್ಟಿ, ಸಿದ್ಧಾರ್ಥ್, ತ್ರಿಶೂಲ್ ಶೆಟ್ಟಿ, ಆನಂದ್ ಕುಂಪಲ, ಜಗನ್ನಾಥ ಶೆಟ್ಟಿ ಬಾಳ, ಮೋಹನ್ ಕೊಪ್ಪಲ, ವಿನೀತ್ ಕುಮಾರ್, ರುಹಾನಿ ಶೆಟ್ಟಿ, ರೋಶನ್ ಶೆಟ್ಟಿ, ಶೈಲಶ್ರೀ, ಧೃತಿ, ನಿರ್ದೇಶಕ ರಂಜಿತ್ ಸಿ ಬಜಾಲ್, ತುಳಸಿದಾಸ್ ಮಂಜೇಶ್ವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿಜೆ ಮಧುರಾಜ್ ನಿರೂಪಿಸಿದರು.
ಸಿನಿಮಾ ಕುರಿತು: “90 ಎಮ್ ಎಲ್” ಸಿನಿಮಾ ಮಂಗಳೂರು, ಉಡುಪಿ, ಪುತ್ತೂರು, ಬೆಳ್ತಂಗಡಿ, ಪಡುಬಿದ್ರೆ, ಸುರತ್ಕಲ್, ಕಾರ್ಕಳ, ದೇರಳಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ಬಿಡುಗಡೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಚಿತ್ರಿಕರಣಗೊಂಡಿದೆ.
ಚಿತ್ರದಲ್ಲಿ ವಿನೀತ್ ಕುಮಾರ್, ರುಹಾನಿ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ರೋಶನ್ ಶೆಟ್ಟಿ, ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರು ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಕಥೆ, ಚಿತ್ರಕಥೆ ಮತ್ತು ನಿರ್ದೇಶನವನ್ನು ರಂಜಿತ್ ಸಿ ಬಜಾಲ್ ನಿರ್ವಹಿಸಿದ್ದು, ಸಂಭಾಷಣೆಯನ್ನು ತುಳಸಿದಾಸ್ ಮಂಜೇಶ್ವರ್ ರಚಿಸಿದ್ದಾರೆ. ಛಾಯಾಗ್ರಹಣ ಅರ್ಜುನ್ ಎಂವಿ, ಸಂಗೀತ ಸೃಜನ್ ಕುಮಾರ್ ತೋನ್ಸೆ, ಸಂಕಲನ ಸಚಿನ್ ರಾಮ್ ಹಾಗೂ ಡಿಸೈನ್ ಆಚಾರ್ಯ ಗುರು ಅವರದ್ದು.
ಹಾಸ್ಯ ಮನರಂಜನೆ ಜೊತೆಗೆ ಉತ್ತಮ ಕಥಾಹಂದರ ಹೊಂದಿರುವ “90 ಎಮ್ ಎಲ್” ಸಿನಿಮಾ ತುಳು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.