ಮಂಗಳೂರು ದಸರಾ ವಿದ್ಯುತ್ ಅಲಂಕಾರಕ್ಕೆ ; ₹67 ಕೋಟಿ ವೆಚ್ಚದಲ್ಲಿ ಭೂಗತ ವಿದ್ಯುತ್ ಕೇಬಲ್ ಯೋಜನೆಗೆ ಮಂಜೂರಾತಿ

ಮಂಗಳೂರು : ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗುತ್ತಿದ್ದ ವಿದ್ಯುತ್ ತಾಂತ್ರಿಕ ಅಡಚಣೆಗಳಿಗೆ ಇದೀಗ ಶಾಶ್ವತ ಪರಿಹಾರ ಸಿಕ್ಕಿದೆ. 

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ ಅಡಚಣೆ ಉಂಟುಮಾಡುತ್ತಿದ್ದ ಮೇಲ್ಮೈ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ, ಭೂಗತ ಕೇಬಲ್ ಅಳವಡಿಸುವ ₹67 ಕೋಟಿ ಮೊತ್ತದ ಬೃಹತ್ ಯೋಜನೆಗೆ ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ.

ಪ್ರತಿ ವರ್ಷ ದಸರಾ ಮೆರವಣಿಗೆಯಲ್ಲಿ ಸಾಗುವ ಎತ್ತರದ ಸ್ತಬ್ಧಚಿತ್ರಗಳು ಹಾಗೂ ರಥಗಳಿಗೆ ಮೇಲ್ಭಾಗದಲ್ಲಿ ಹಾದುಹೋಗುತ್ತಿದ್ದ ವಿದ್ಯುತ್ ತಂತಿಗಳು ದೊಡ್ಡ ಅಡಚಣೆಯಾಗುತ್ತಿತ್ತು. ಸುರಕ್ಷತಾ ಕಾರಣಗಳಿಂದ ಮೆರವಣಿಗೆ ವೇಳೆ ನಗರದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಪರಿಸ್ಥಿತಿ ಉಂಟಾಗುತ್ತಿತ್ತು. ಇದರಿಂದ ಸಾರ್ವಜನಿಕರು ಹಾಗೂ ವ್ಯಾಪಾರಿಗಳಿಗೆ ತೊಂದರೆ ಉಂಟಾಗುತ್ತಿತ್ತು.

ಈ ಗಂಭೀರ ಸಮಸ್ಯೆಯನ್ನು ಮನಗಂಡ ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿ, ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ವಿಷಯದ ಮಹತ್ವ ಅರಿತ ಯು.ಟಿ. ಖಾದರ್ ಇಂಧನ ಸಚಿವರೊಂದಿಗೆ ಸತತ ಸಂಪರ್ಕ ಸಾಧಿಸಿ ಯೋಜನೆಗೆ ಅನುಮೋದನೆ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದರು.

ಟೆಂಡರ್ ಪ್ರಕ್ರಿಯೆಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಿ, ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ತಿಳಿಸಿದ್ದಾರೆ.

ಈ ಯೋಜನೆ ಜಾರಿಯಾದ ಬಳಿಕ ಮೆರವಣಿಗೆ ವೇಳೆ ವಿದ್ಯುತ್ ಅಪಘಾತಗಳ ಭಯವಿಲ್ಲದೆ ಸುಗಮವಾಗಿ ಕಾರ್ಯಕ್ರಮ ನಡೆಯಲಿದ್ದು, ಮಳೆಗಾಲದಲ್ಲಿ ಮರಗಳು ಬಿದ್ದು ಉಂಟಾಗುವ ವಿದ್ಯುತ್ ವ್ಯತ್ಯಯ ಸಮಸ್ಯೆಗೂ ಪರಿಹಾರ ಸಿಗಲಿದೆ. ಜೊತೆಗೆ ನಗರದಲ್ಲಿ ವಿದ್ಯುತ್ ತಂತಿಗಳ ಜಾಲ ಕಡಿಮೆಯಾಗುವುದರಿಂದ ಮಂಗಳೂರು ನಗರದ ಸೌಂದರ್ಯವೂ ಹೆಚ್ಚಲಿದೆ.

ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Previous Post Next Post