ಮಂಗಳೂರು: 2017ರ ಅಕ್ಟೋಬರ್ 4ರಂದು ಉಳ್ಳಾಲ ತಾಲೂಕಿನ ಮುಕ್ಕಚ್ಚೇರಿ ಮಸೀದಿ ಎದುರು ನಡೆದಿದ್ದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಅಂದು ರಾತ್ರಿ ಸುಮಾರು 7:55 ಗಂಟೆಗೆ ಜುಬೇರ್ ಅವರು ತಮ್ಮ ಸ್ನೇಹಿತ ಇಲಿಯಾಸ್ ಜೊತೆ ಮಾತನಾಡುತ್ತಿದ್ದ ವೇಳೆ, ಆರೋಪಿಗಳು ತಲ್ವಾರ್ ಹಾಗೂ ಉದ್ದದ ಕತ್ತಿಗಳಂತಹ ಮಾರಕಾಯುಧಗಳೊಂದಿಗೆ ದಾಳಿ ನಡೆಸಿ ಜುಬೇರ್ ಅವರನ್ನು ಕ್ರೂರವಾಗಿ ಕೊಲೆ ಮಾಡಿದ್ದರು.
ಮಧ್ಯಪ್ರವೇಶಿಸಲು ಯತ್ನಿಸಿದ ಇಲಿಯಾಸ್ ಮೇಲೂ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಲಾಗಿತ್ತು.
ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸ್ ನಿರೀಕ್ಷಕರಾದ ಕೆ.ಆರ್. ಗೋಪಿಕೃಷ್ಣ ಅವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಈಗಾಗಲೇ 2ರಿಂದ 4ನೇ ಆರೋಪಿಗಳಿಗೆ 2022ರ ಏಪ್ರಿಲ್ 20ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು.
6 ಮತ್ತು 7ನೇ ಆರೋಪಿಗಳು ಖುಲಾಸೆಯಾಗಿದ್ದು, 5ನೇ ಆರೋಪಿ ಅಲ್ತಾಫ್ ಮೃತಪಟ್ಟಿದ್ದಾನೆ.
ಇದೇ ವೇಳೆ, ಜಾಮೀನಿನ ಮೇಲೆ ಬಿಡುಗಡೆಯಾಗಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಬ್ದುಲ್ ರಹಿಮಾನ್ ಸುಹೇಲ್‌ನನ್ನು ವಾರೆಂಟ್ ಮೂಲಕ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಪ್ರಕರಣದ ಮುಂದುವರಿದ ವಿಚಾರಣೆಯಲ್ಲಿ, 2026ರ ಏಪ್ರಿಲ್ 22ರಂದು ನ್ಯಾಯಾಧೀಶರಾದ ಶ್ರೀಮತಿ ಸುನೀತಾ ಅವರು ಆರೋಪಿ ಸುಹೇಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಮೋಹನ್ ಅವರು ವಾದ ಮಂಡಿಸಿದ್ದರು.
Tags
ಅಪರಾಧ