ಅಮರಾವತಿ : ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ; 180ಕ್ಕೂ ಹೆಚ್ಚು ಯುವತಿಯರ ದುರುಪಯೋಗ ಆರೋಪದಲ್ಲಿ 19 ವರ್ಷದ ಯುವಕ ಬಂಧನ, ಆರೋಪಿ ಮನೆ ಭಾಗಶಃ ಧ್ವಂಸ

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರನ್ನು ಪ್ರೇಮದ ಹೆಸರಿನಲ್ಲಿ ಮೋಸಗೊಳಿಸಿ ಲೈಂಗಿಕವಾಗಿ ದುರುಪಯೋಗಪಡಿಸಿ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ ಆರೋಪದಲ್ಲಿ 19 ವರ್ಷದ ಆಯಾನ್ ಅಹ್ಮದ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ ಕನಿಷ್ಠ 180ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರನ್ನು “ಲವ್ ಟ್ರ್ಯಾಪ್” ಮೂಲಕ ತನ್ನ ಬಲೆಗೆ ಸೆಳೆದು, ಮುಂಬೈ ಮತ್ತು ಪುಣೆ ನಗರಗಳಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ, ಅವುಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನೆಂಬ ಆರೋಪ ಕೇಳಿಬಂದಿದೆ.

ಈ ಭಾರೀ ಪ್ರಕರಣವು ಆರೋಪಿ ಆಯನ್ ಅಹ್ಮದ್ ಮತ್ತು ಉಜೇರ್ ಖಾನ್ ನಡುವಿನ ಹಣಕಾಸು ವಿಚಾರದ ಜಗಳದಿಂದ ಬಹಿರಂಗವಾಗಿದೆ. ಇಬ್ಬರೂ ಯಾರು ಹೆಚ್ಚು ಹುಡುಗಿಯರನ್ನು ಸೆಳೆಯುತ್ತಾರೆ ಎಂಬ ಪಣವನ್ನೂ ಹಾಕಿಕೊಂಡಿದ್ದರು ಎನ್ನಲಾಗಿದೆ. ನಂತರ ಈ ಸ್ಪರ್ಧೆ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಆನ್‌ಲೈನ್‌ನಲ್ಲಿ ಹಂಚುವ ಮಟ್ಟಕ್ಕೆ ಹೋಗಿದೆ ಎಂದು ಮೂಲಗಳು ತಿಳಿಸಿವೆ.

ಅಚಲಪುರ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿರುವ ಆಯನ್, ಮುಂಚೆ ಅಸದುದ್ದೀನ್ ಓವೈಸಿಯ AIMIM ಪಕ್ಷದ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುತ್ತಿದ್ದನೆಂದು ತಿಳಿದುಬಂದಿದೆ.

ಕಳೆದ ಎರಡು ವಾರಗಳಿಂದ ಕೆಲವು ಅಶ್ಲೀಲ ವಿಡಿಯೋಗಳು ವೈರಲ್ ಆಗುತ್ತಿದ್ದುದನ್ನು ಗಮನಿಸಿದ ಸ್ಥಳೀಯ ಪೌರಸಭಾ ಸದಸ್ಯ ಮುಜೀಬ್ ರಶೀದ್, ಆರಂಭದಲ್ಲಿ ಇದು ಒಬ್ಬರ ವೈಯಕ್ತಿಕ ವಿಷಯವೆಂದು ಭಾವಿಸಿದ್ದರು. ಆದರೆ ನಂತರ 18 ಲೈಂಗಿಕ ವಿಡಿಯೋಗಳು ಹಾಗೂ 39 ಅಶ್ಲೀಲ ಫೋಟೋಗಳು ಪತ್ತೆಯಾಗಿದ್ದು, ಇದು ಗಂಭೀರ ದೌರ್ಜನ್ಯ ಪ್ರಕರಣವೆಂದು ಬೆಳಕಿಗೆ ಬಂದಿದೆ.

ಆರೋಪಿ ಯುವಕ ಬಾಡಿಗೆ ಕೋಣೆಯಲ್ಲಿ ಬಾಲಕಿಯರೊಂದಿಗೆ ಸಂಬಂಧ ಬೆಳೆಸಿ, ಅವರ ಅಜ್ಞಾತದಲ್ಲಿ ವಿಡಿಯೋ ಚಿತ್ರೀಕರಿಸಿ ನಂತರ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನೆಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳ ಮೂಲಕವೂ ಸಂಪರ್ಕ ಸಾಧಿಸಿದ್ದಾನೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ಬೆಳಕಿಗೆ ಬಂದ 24 ಗಂಟೆಗಳೊಳಗೆ ಆರೋಪಿ ಮನೆಯನ್ನೂ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ಈ ಪ್ರಕರಣದ ತನಿಖೆಗೆ 47 ಸದಸ್ಯರ ವಿಶೇಷ ತಂಡ (SIT) ರಚಿಸಲಾಗಿದ್ದು, ವಿಡಿಯೋಗಳನ್ನು ಹಂಚಿದ ಆರೋಪದಲ್ಲಿ ಇನ್ನೂ ಮೂವರು ಯುವಕರನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿಗಳನ್ನು ಏಪ್ರಿಲ್ 21ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಇಲ್ಲಿಯವರೆಗೆ 8 ಮಂದಿ ಸಂತ್ರಸ್ತರನ್ನು ಪೊಲೀಸರು ಗುರುತಿಸಿದ್ದು, ಅವರ ಕುಟುಂಬಗಳಿಂದ ಹೇಳಿಕೆಗಳನ್ನು ಪಡೆಯಲಾಗುತ್ತಿದೆ ಎಂದು ಅಮರಾವತಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಶ್ವಲ್ ಆನಂದ್ ತಿಳಿಸಿದ್ದಾರೆ.

ಕೆಲವು ಸಂಘಟನೆಗಳು ಈ ಪ್ರಕರಣವನ್ನು “ಲವ್ ಜಿಹಾದ್” ಎಂದು ಕರೆಯುತ್ತಿದ್ದರೂ, ಅಧಿಕಾರಿಗಳು ಅದನ್ನು ತಳ್ಳಿ ಹಾಕಿದ್ದಾರೆ. ಈಗಾಗಲೇ ಗುರುತಿಸಲ್ಪಟ್ಟ ಸಂತ್ರಸ್ತರು ಎಲ್ಲಾ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
Previous Post Next Post