ಕಾವೂರು: ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಆಯೋಜಿಸಿದ ‘ರಂಗೋತ್ಸವ 2026’ ನಾಲ್ಕು ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಮರಕಡ ಸರಕಾರಿ ಶಾಲಾ ಆವರಣದಲ್ಲಿ ಜರುಗಿತು.
ಓಷಿಯನ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಇನಾಯತ್ ಅಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳಿಗೆ ರಂಗ ತರಬೇತಿ ಹಾಗೂ ಕಲೆಗಳ ಮೂಲಕ ಸಂಸ್ಕಾರ ನೀಡುವುದು ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮರಕಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಭವಾನಿ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಸೇವೆಯನ್ನು ಗುರುತಿಸಿ ‘ರಂಗೋತ್ಸವ 2026’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಭವಾನಿ, ತಮ್ಮ ವೃತ್ತಿ ಜೀವನದಲ್ಲಿ ಮಕ್ಕಳೊಂದಿಗೆ ಕಳೆದ ಕ್ಷಣಗಳೇ ಅತ್ಯಂತ ಅಮೂಲ್ಯ ಎಂದು ಹೇಳಿ, ಕಲೆಗಳ ಮೂಲಕ ಮಕ್ಕಳಿಗೆ ಜೀವನ ಪಾಠ ಕಲಿಸುವುದು ಮಹತ್ವದ್ದಾಗಿದೆ ಎಂದು ಹೇಳಿದರು.
ಪರಿಸರವಾದಿ ದಿನೇಶ್ ಹೊಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವಲ್ಲಿ ಇಂತಹ ಶಿಬಿರಗಳು ಉತ್ತಮ ವೇದಿಕೆಯಾಗಿವೆ. ಪಠ್ಯ ಶಿಕ್ಷಣದ ಜೊತೆಗೆ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟರು.
ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶರತ್ ಕುಮಾರ್ ಹಾಗೂ ಮರಕಡ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶೋಭಾ ಅತಿಥಿಗಳಾಗಿ ಭಾಗವಹಿಸಿದ್ದರು.
ರಂಗ ಸ್ವರೂಪ ಸಂಸ್ಥೆಯ ಅಧ್ಯಕ್ಷ ರೆಹಮಾನ್ ಖಾನ್ ಕುಂಜತ್ತಬೈಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಝುಬೇರ್ ಖಾನ್ ಕುಡ್ಲ ಸ್ವಾಗತಿಸಿದರು.
ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು ವಂದಿಸಿದರು. ಪ್ರೇಮನಾಥ್ ಮರ್ಣೆ ಮತ್ತು ತಸ್ಲೀಮಾ ಬಾನು ಹನೀಷಾ ಸವಾದ್ ಕಾರ್ಯಕ್ರಮ ನಿರೂಪಿಸಿದರು.
Tags
ಮಂಗಳೂರು