ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ 15 ವರ್ಷದ ಬಾಲಕ ಸಾವು ; ಕ್ರಿಕೆಟ್ ಆಡುತ್ತಿದ್ದಾಗ ನಡೆದ ದುರ್ಘಟನೆ

ಮಂಗಳೂರು: ಹದಿನೈದು ವರ್ಷದ ಬಾಲಕನೊಬ್ಬ ಕ್ರಿಕೆಟ್ ಆಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್‌ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ಮಹಾಕಾಳಿಪಡ್ಪು ಸಮೀಪ ನಡೆದಿದೆ. 

ಮೃತ ದುರ್ದೈವಿ ವರುಣ್(15)
ಹಾವೇರಿಯ ಬ್ಯಾಡಗಿ ಮೂಲದವನಾಗಿದ್ದು, ಮಹಾಕಾಳಿಪಡ್ಪುವಿನ ನಿರ್ಮಲ ನಗರದಲ್ಲಿ ತಂದೆ ತಾಯಿಯೊಂದಿಗೆ ವಾಸವಾಗಿದ್ದನು.

ಮಹಾಕಾಳಿಪಡ್ಪು ಅಂಡರ್‌ಪಾಸ್ ಬಳಿ ಭಜನಾ ಮಂದಿರದ ಸಮೀಪ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿರುವಾಗ ಚೆಂಡು ಮಂದಿರದ ಛಾವಣಿಯ ಮೇಲೆ ಬಿತ್ತು. ಚೆಂಡನ್ನು ಹೆಕ್ಕಲು ಛಾವಣಿ ಏರಿದಾಗ ಆಕಸ್ಮಿಕವಾಗಿ ಮೇಲಿದ್ದ ವಿದ್ಯುತ್‌ ತಂತಿ ವರುಣ್‌ಗೆ ತಾಗಿ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಆತ ಅಸುನೀಗಿದ್ದಾನೆ.

ವರುಣ್ ತಂದೆ ಕಣ್ಣನ ಗೌಡ ಅವರು ಕಳೆದ 25 ವರ್ಷಗಳಿಂದ ಮಂಗಳೂರಿನಲ್ಲಿ ಸಣ್ಣ ಕ್ಯಾಂಟೀನ್ ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ. ವರುಣ್ ಇತ್ತೀಚೆಗಷ್ಟೇ SSLC ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದನು. ರಜೆಯ ಸಂಭ್ರಮದಲ್ಲಿದ್ದ ಮಗ ವಿಧಿವಶನಾಗಿರುವುದು ಕುಟುಂಬಸ್ಥರ ದುಃಖಕ್ಕೆ ಕಾರಣವಾಗಿದೆ.
Previous Post Next Post