ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಳಲಗಾಂವ ಗ್ರಾಮದ ಸಮೀಪ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಂಗಳೂರು ಮೂಲದ ವೆಬ್ ಡೆವಲಪರ್ ಮುಕೇಶ್ ಕೃಷ್ಣ ಶೆಟ್ಟಿ (39) ಅವರು ಮೃತಪಟ್ಟಿದ್ದಾರೆ.
ಮ್ಯಾಕ್ಸ್ ಇನ್ಫೋಟೆಕ್ ಸಂಸ್ಥೆಯ ಸಂಸ್ಥಾಪಕರಾಗಿದ್ದ ಮುಕೇಶ್ ಶೆಟ್ಟಿ ಅವರು ಮಾರ್ಚ್ 5 ರಂದು ಕುಂದಾಪುರದಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣವೇ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಘಟನೆ ಸ್ಥಳದಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮೃತ ಮುಕೇಶ್ ಕೃಷ್ಣ ಶೆಟ್ಟಿ ಅವರು ಪತ್ನಿ, ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ. ಯುವ ಉದ್ಯಮಿಯ ಅಕಾಲಿಕ ನಿಧನಕ್ಕೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಪರಿಚಿತರಲ್ಲಿ ದುಃಖದ ವಾತಾವರಣ ಮನೆಮಾಡಿದೆ.
Post a Comment