ಮಂಗಳೂರು: ನಗರದ ತೋಕ್ಕೊಟ್ಟು ಫ್ಲೈಓವರ್ ಮೇಲೆ ನಡೆದಿದ್ದ ರೌಡಿಶೀಟರ್ ಆರಿಫ್ ಅಲಿಯಾಸ್ 'ಟ್ಯಾಬ್ಲೆಟ್ ಆರಿಫ್' ಕೊಲೆ ಪ್ರಕರಣದ ತನಿಖೆಯನ್ನು ಮಂಗಳೂರು ಸಿಸಿಬಿ (CCB) ಎಸಿಪಿ ಅವರಿಗೆ ವರ್ಗಾಯಿಸಲಾಗಿದೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪೊಲೀಸರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಆರು ಪ್ರಮುಖ ಆರೋಪಿಗಳ ಗುರುತು ಪತ್ತೆ:
ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ಆರು ಮಂದಿ ಆರೋಪಿಗಳನ್ನು ಪೊಲೀಸರು ಈಗಾಗಲೇ ಗುರುತಿಸಿದ್ದಾರೆ. ಆದರೆ, ಆರೋಪಿಗಳು ಸತತವಾಗಿ ತಮ್ಮ ಅಡಗುತಾಣಗಳನ್ನು ಬದಲಿಸುತ್ತಿರುವುದು ಮತ್ತು ಚಲನವಲನ ನಡೆಸುತ್ತಿರುವುದು ಅವರನ್ನು ತಕ್ಷಣವೇ ಬಂಧಿಸಲು ಸವಾಲಾಗಿ ಪರಿಣಮಿಸಿದೆ. ವಿಶೇಷ ತಂಡಗಳು ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿವೆ.
ಸಂಚಿನ ಹಿಂದಿರುವ ಇತರರ ಮೇಲೆ ಕಣ್ಣು:
ತನಿಖೆಯ ವೇಳೆ ಕೃತ್ಯದ ಸಂಪೂರ್ಣ ಸಂಚು ಮತ್ತು ಘಟನೆಗಳ ಸರಣಿಯನ್ನು ಮರುನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಇನ್ನೂ ಹಲವರು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಿಗೆ ಕೃತ್ಯ ಎಸಗಲು ಸಹಾಯ ಮಾಡಿದವರು ಅಥವಾ ಅವರು ತಪ್ಪಿಸಿಕೊಳ್ಳಲು ಮತ್ತು ಅಡಗಿಕೊಳ್ಳಲು ಆಶ್ರಯ ನೀಡಿದ ಶಂಕಿತ ವ್ಯಕ್ತಿಗಳನ್ನು ಪ್ರಸ್ತುತ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ವಿಚಾರಣೆಯಲ್ಲಿ ಅವರ ಪಾತ್ರ ದೃಢಪಟ್ಟಲ್ಲಿ, ಅಂತಹವರನ್ನೂ ಸಹ ಬಂಧಿಸಲಾಗುವುದು ಎಂದು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಚ್ಚರಿಕೆ: ಆಶ್ರಯ ನೀಡಿದವರಿಗೆ ಕಠಿಣ ಶಿಕ್ಷೆ:
ಆರೋಪಿಗಳಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವ ಅಥವಾ ಅವರಿಗೆ ಆಶ್ರಯ ನೀಡುವ ವ್ಯಕ್ತಿಗಳ ವಿರುದ್ಧ ಬಿಎನ್ಎಸ್ (BNS) ಸೆಕ್ಷನ್ 249(ಎ) ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಪುನರುಚ್ಚರಿಸಿದೆ. ಅಪರಾಧಕ್ಕೆ ಸಹಕರಿಸುವವರನ್ನು ಯಾವುದೇ ಮುಲಾಜಿಲ್ಲದೆ ಕಾನೂನಿನ ಅಡಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Post a Comment