ಮಂಗಳೂರು : ಭಾರೀ ಮಳೆಗೆ ತಡೆಗೋಡೆ ಕುಸಿತ ; ಇಬ್ಬರು ಬಾಲಕಿಯರು ಸೇರಿ ಮೂವರು ದುರ್ಮರಣ

ಮಂಗಳೂರು : ನಗರದ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗರೋಡಿಯ ಮಾರಿಯಲ್ ಹೌಸ್ ಸಮೀಪ ಬುಧವಾರ ಮುಂಜಾನೆ ಸುಮಾರು 4.45 ರಿಂದ 5 ಗಂಟೆಯ ವೇಳೆಗೆ ಭಾರೀ ಮಳೆಯ ಪರಿಣಾಮ ತಡೆಗೋಡೆ ಕುಸಿದು ಭಾರೀ ದುರಂತ ಸಂಭವಿಸಿದೆ.

ತಡೆಗೋಡೆಯ ಕೆಳಭಾಗದಲ್ಲಿದ್ದ ಬಾಡಿಗೆ ಮನೆಗಳ ಹಿಂಭಾಗದ ಗೋಡೆಗಳು ಕುಸಿದಿದ್ದು, ನಾಲ್ಕು ಕುಟುಂಬಗಳು ವಾಸವಾಗಿದ್ದ ಮನೆಗಳಿಗೆ ಹಾನಿಯಾಗಿದೆ. ಅವುಗಳಲ್ಲಿ ಎರಡು ಕುಟುಂಬಗಳು ತೀವ್ರವಾಗಿ ಪರಿಣಾಮಕ್ಕೊಳಗಾಗಿವೆ.

ಬಿಹಾರ ಮೂಲದ ಲಾಲ್‌ಬಾಬು (37) ಹಾಗೂ ಪತ್ನಿ ಇಂದು (34) ಕಳೆದ ಎಂಟು ವರ್ಷಗಳಿಂದ ಇಲ್ಲಿ ವಾಸವಾಗಿದ್ದರು. ಇವರಿಗೆ ಅಲ್ಕಾ (14), ಅನುಷ್ಕಾ (11), ಅನಾಮಿಕಾ (7) ಮತ್ತು ತನು (3) ಎಂಬ ನಾಲ್ವರು ಪುತ್ರಿಯರಿದ್ದಾರೆ. ದುರಂತದಲ್ಲಿ ಲಾಲ್‌ಬಾಬು, ಇಂದು ಹಾಗೂ ಅಲ್ಕಾ ಮತ್ತು ಅನುಷ್ಕಾ ಸುರಕ್ಷಿತವಾಗಿ ರಕ್ಷಿಸಲ್ಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಪತ್ತೆಯಾದ ಅನಾಮಿಕಾ (7) ಮತ್ತು ತನು (3) ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಮತ್ತೊಂದು ಮನೆಯಲ್ಲಿ ವಾಸವಾಗಿದ್ದ ಉಡುಪಿ ಮೂಲದ ಬಾಲಕೃಷ್ಣ (40) ಹಾಗೂ ಪತ್ನಿ ಶಾಂತಾ (35) ಕಳೆದ ಎಂಟು ತಿಂಗಳಿಂದ ಇಲ್ಲಿ ಬಾಡಿಗೆಗೆ ನೆಲೆಸಿದ್ದರು. ಬಾಲಕೃಷ್ಣ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಶಾಂತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಗಾಯಾಳುಗಳನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯು ಅನಾಮಿಕಾ (7), ತನು (3) ಹಾಗೂ ಶಾಂತಾ (35) ಮೃತಪಟ್ಟಿರುವುದನ್ನು ದೃಢಪಡಿಸಿದೆ.

ಘಟನಾ ಸ್ಥಳಕ್ಕೆ ಕಂಕನಾಡಿ ಪೊಲೀಸರು, ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Previous Post Next Post