ಸಾಮಾಜಿಕ ಜಾಲತಾಣದಲ್ಲಿ 'ನಝೀರ ಮಂಗಳೂರು' ಖಾತೆಯಿಂದ ಕೋಮು ದ್ವೇಷ ಪ್ರಚೋದನೆ : ಆರೋಪಿಗೆ ನ್ಯಾಯಾಂಗ ಬಂಧನ

ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷವನ್ನು ಪ್ರಚೋದಿಸುವ ಉದ್ದೇಶದಿಂದ ತಿರುಚಿದ ವಿಡಿಯೋ ಹಂಚಿದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

2025ರ ಅಕ್ಟೋಬರ್ ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ “ನಝೀರ ಮಂಗಳೂರು” ಎಂಬ ಖಾತೆಯಿಂದ AI ತಂತ್ರಜ್ಞಾನ ಬಳಸಿ ತಿರುಚಿದ ವಿಡಿಯೋವನ್ನು ಹಂಚಿ ಸಮಾಜದಲ್ಲಿ ಅಶಾಂತಿ ಉಂಟುಮಾಡಲು ಪ್ರಯತ್ನಿಸಲಾಗಿದೆ ಎಂಬ ಆರೋಪದ ಮೇಲೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (BNS)ಯ ಕಲಂ 196, 353(1), 351(2) ಅಡಿಯಲ್ಲಿ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ತನಿಖೆಯ ಸಂದರ್ಭದಲ್ಲಿ “ನಝೀರ ಮಂಗಳೂರು” ಖಾತೆಯ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕುಡೆಲ್ ಹೌಸ್ ನಿವಾಸಿ ಮಹಮ್ಮದ್ ರಫೀಕ್ (38) ಇರುವುದಾಗಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಆರೋಪಿಯನ್ನು ಮಾರ್ಚ್ 22, 2026ರಂದು ಬೆಂಗಳೂರಿನಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 

ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Previous Post Next Post