Top News

ಬಾಲ್ಯದಲ್ಲಿ ತಂದೆ ಬಿತ್ತಿದ ಕನಸು ನನಸು : ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕಿರಣ್ ಕಮತೆ ಭರ್ಜರಿ ಸಾಧನೆ : ದೇಶಕ್ಕೆ 53ನೇ ರ‌್ಯಾಂಕ್, ರಾಜ್ಯಕ್ಕೆ ಪ್ರಥಮ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹತ್ತರವಾಟ ಗ್ರಾಮದ ಕಿರಣ್ ಸಣ್ಣಪ್ಪ ಕಮತೆ (29) ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 53ನೇ ರ್ಯಾಂಕ್ ಹಾಗೂ ಕರ್ನಾಟಕಕ್ಕೆ ಪ್ರಥಮ ಸ್ಥಾನ ಪಡೆದು ಮಹತ್ವದ ಸಾಧನೆ ಮೆರೆದಿದ್ದಾರೆ.
ಬೆಳಗಾವಿಯ ಗೋಗಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ (ಸಿವಿಲ್) ಪದವಿ ಪಡೆದಿರುವ ಕಿರಣ್ ಕಮತೆ ಅವರು ಸದ್ಯ ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಮುಖ್ಯ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಿರಣ್ ಅವರ ತಂದೆ ಡಾ. ಸಣ್ಣಪ್ಪ ಕಮತೆ ಅವರು ನಿಡಸೋಸಿಯ ಹೀರಾ ಶುಗರ್ಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ರುಕ್ಮಿಣಿ ಗೃಹಿಣಿಯಾಗಿದ್ದಾರೆ.

ಕಿರಣ್ ಅವರ ವಿದ್ಯಾಭ್ಯಾಸ ವಿಭಿನ್ನ ಹಾದಿಯಲ್ಲಿ ಸಾಗಿದ್ದು, 1 ಮತ್ತು 2ನೇ ತರಗತಿಯನ್ನು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬೆಜೋಗಾಯಿಯ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ನಂತರ 3ರಿಂದ 8ನೇ ತರಗತಿ ವರೆಗೆ ಹುಬ್ಬಳ್ಳಿಯ ಎಂ.ಆರ್. ಸಾಕ್ಹರೆ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 9 ಮತ್ತು 10ನೇ ತರಗತಿಯನ್ನು ಗದಗದ ಕೆಎಲ್‌ಇ ಸಂಸ್ಥೆಯ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿ, ನಿಪ್ಪಾಣಿಯ ಜಿ.ಐ. ಬಾಗೇವಾಡಿ ಕಾಲೇಜಿನಲ್ಲಿ ಪಿಯುಸಿ (ಸೈನ್ಸ್) ಓದಿದ್ದಾರೆ. ಬಳಿಕ ಗೋಗಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ (ಸಿವಿಲ್) ಪದವಿ ಪಡೆದಿದ್ದಾರೆ. 

2023ರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ನೇಮಕಗೊಂಡಿದ್ದರು.

“ಇದು ನನ್ನ ಕೊನೆಯ ಅವಕಾಶ”
ಯುಪಿಎಸ್‌ಸಿ ಸಾಧನೆ ಕುರಿತು ಮಾತನಾಡಿದ ಕಿರಣ್ ಕಮತೆ, “ಇದು ನನ್ನ ಕೊನೆಯ ಅವಕಾಶವಾಗಿತ್ತು. ಕೆಲಸ ಮಾಡುತ್ತಲೇ ಪ್ರತಿದಿನ ಐದರಿಂದ ಆರು ಗಂಟೆಗಳ ಕಾಲ ಓದುತ್ತಿದ್ದೆ. ಈ ಬಾರಿ ಯಾವುದೇ ರೀತಿಯಿಂದಲಾದರೂ ಪಾಸ್ ಆಗಲೇಬೇಕು ಎಂಬ ಸಂಕಲ್ಪದಿಂದ ಪರೀಕ್ಷೆ ಬರೆದಿದ್ದೆ. 250 ರ್ಯಾಂಕ್ ಒಳಗೆ ಬರುವ ನಿರೀಕ್ಷೆ ಇತ್ತು. ಆದರೆ 53ನೇ ರ್ಯಾಂಕ್ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ದೊರೆತಿರುವುದು ತುಂಬಾ ಸಂತೋಷ ತಂದಿದೆ” ಎಂದು ಹೇಳಿದರು.

ಬಾಲ್ಯದಲ್ಲೇ ತಂದೆಯವರು ಯುಪಿಎಸ್‌ಸಿ ಕನಸನ್ನು ಬಿತ್ತಿದ್ದರು. ಕಳೆದ ಆರು ವರ್ಷಗಳಿಂದ ನಿರಂತರ ಪ್ರಯತ್ನ ಮಾಡುತ್ತಿದ್ದೆ. ಈ ಸಾಧನೆಯನ್ನು ತಂದೆ-ತಾಯಿಗೆ ಅರ್ಪಿಸುತ್ತೇನೆ. ಪತ್ನಿ ಲೋಚನಾ ಅವರ ಸಹಕಾರವೂ ಮಹತ್ವದ್ದಾಗಿದೆ. ಸಹೋದರಿ, ಸಂಬಂಧಿಕರು, ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಕಿರಣ್ ಭಾವುಕರಾಗಿ ಹೇಳಿದರು.

ಇನ್ನೊಂದೆಡೆ ಕಿರಣ್ ಅವರ ತಂದೆ ಡಾ. ಸಣ್ಣಪ್ಪ ಕಮತೆ ಮಾತನಾಡಿ, ಶಿಕ್ಷಕರ ಮಕ್ಕಳು ಹಾಗೂ ಸಾಮಾನ್ಯ ಕುಟುಂಬದಿಂದ ಬಂದ ಮಕ್ಕಳು ಸಾಧನೆ ಮಾಡುವುದು ಹೆಮ್ಮೆಯ ಸಂಗತಿ. ಇದು ಇತರರಿಗೆ ಪ್ರೇರಣೆಯಾಗುತ್ತದೆ. ನಮ್ಮ ಮಗನ ಕಠಿಣ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

Post a Comment

Previous Post Next Post