ನವದೆಹಲಿ :ಹದಿಮೂರು ವರ್ಷಗಳ ಕಾಲ ಕೋಮಾದಲ್ಲಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ 31 ವರ್ಷದ ಹರೀಶ್ ರಾಣಾ ಅವರು ಮಂಗಳವಾರ (ಮಾರ್ಚ್ 24) ಸಂಜೆ 4:10ರ ಸುಮಾರಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
2013ರಲ್ಲಿ ನಡೆದ ಅಪಘಾತದ ಬಳಿಕ ಕೋಮಾ ಸ್ಥಿತಿಗೆ ಜಾರಿದ್ದ ರಾಣಾ, ಸುಪ್ರೀಂ ಕೋರ್ಟ್‌ನಿಂದ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಪಡೆದ ಭಾರತದ ಮೊದಲ ವ್ಯಕ್ತಿ ಎಂಬ ದಾಖಲೆ ಹೊಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಆಮ್ಲಜನಕದ ನೆರವಿನಿಂದ ಮಾತ್ರ ಜೀವಿಸುತ್ತಿದ್ದರು.
ಪಂಜಾಬ್ ವಿಶ್ವವಿದ್ಯಾಲಯದ ಬಿ.ಟೆಕ್ ವಿದ್ಯಾರ್ಥಿಯಾಗಿದ್ದ ವೇಳೆ 2013ರಲ್ಲಿ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತೀವ್ರ ತಲೆಯ ಗಾಯಗೊಂಡಿದ್ದು, ಅದರಿಂದ ಅವರು ದೀರ್ಘಕಾಲ ಕೋಮಾದಲ್ಲಿದ್ದರು. ಚೇತರಿಕೆ ಸಾಧ್ಯತೆಯಿಲ್ಲದ ಹಿನ್ನೆಲೆಯಲ್ಲಿ ಕುಟುಂಬದವರು ದಯಾಮರಣಕ್ಕೆ ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಹಿಂದೆ 2024ರಲ್ಲಿ ದೆಹಲಿ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದ್ದರೂ, ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕುಟುಂಬದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಪರಿಗಣಿಸಿತು. ವೈದ್ಯಕೀಯ ವರದಿಗಳ ಸಮಗ್ರ ಪರಿಶೀಲನೆಯ ಬಳಿಕ, ದೀರ್ಘಕಾಲದ ಯಾತನೆಯಿಂದ ಬಿಡುಗಡೆಗೊಳಿಸುವ ಉದ್ದೇಶದಿಂದ ಜೀವ ರಕ್ಷಕ ಸಾಧನಗಳನ್ನು ಹಿಂಪಡೆಯಲು ಅನುಮತಿ ನೀಡಲಾಗಿತ್ತು.
ನಿಷ್ಕ್ರಿಯ ದಯಾಮರಣವೆಂದರೆ ರೋಗಿಯ ಜೀವ ಉಳಿಸುವ ವೈದ್ಯಕೀಯ ಬೆಂಬಲವನ್ನು ಹಿಂತೆಗೆದು, ನೈಸರ್ಗಿಕ ಮರಣಕ್ಕೆ ಅವಕಾಶ ಕಲ್ಪಿಸುವ ವಿಧಾನವಾಗಿದೆ. ಈ ತೀರ್ಪಿನೊಂದಿಗೆ, ಈ ಕುರಿತು ಸಮಗ್ರ ಕಾನೂನು ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಹರೀಶ್ ರಾಣಾ ಅವರ ನಿಧನವು ಕೇವಲ ಒಂದು ಕುಟುಂಬದ ದುಃಖಕರ ಘಟನೆ ಮಾತ್ರವಲ್ಲದೆ, ದೇಶದ ಕಾನೂನು ಮತ್ತು ನೈತಿಕ ಚರ್ಚೆಗಳಲ್ಲಿ ಮಹತ್ವದ ಮೈಲಿಗಲ್ಲಾಗಿ ಪರಿಗಣಿಸಲಾಗುತ್ತಿದೆ.
Post a Comment