ಕಳ್ಳತನ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಸುಳ್ಯ : 2018ರ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದ ತುಮಕೂರು ಮೂಲದ ಅಶ್ವನ್ ಗೌಡ ಜೆ.ಪಿ.ಗೆ ಸುಳ್ಯದ ಪ್ರಥಮ ದರ್ಜೆ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್‌ಸಿ ನ್ಯಾಯಾಲಯವು ಒಂದು ವರ್ಷದ ಸಾದಾರಣ ಕಾರಾಗೃಹ ಶಿಕ್ಷೆ ಹಾಗೂ ₹1000 ದಂಡ ವಿಧಿಸಿ ತೀರ್ಪು ನೀಡಿದೆ.

2018ರ ಮೇ 16ರಂದು ರಾತ್ರಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ.ಸಂಖ್ಯೆ 25/2018, ಭಾರತೀಯ ದಂಡ ಸಂಹಿತೆಯ 379ನೇ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ವೇಳೆ ಆರೋಪದೋಷ ಸಾಬೀತಾಗಿದ್ದು, ಮೊದಲಿಗೆ ಆರೋಪಿಯನ್ನು ಪ್ರೊಬೇಷನ್ ಆಫ್ ಆಫೆಂಡರ್ಸ್ ಆಕ್ಟ್ ಅಡಿಯಲ್ಲಿ ಬಿಡುಗಡೆ ಮಾಡಲಾಗಿತ್ತು.

ಆದರೆ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ವಾರೆಂಟ್ ಜಾರಿಯಾಗಿತ್ತು.
ಇದೀಗ ಮಾರ್ಚ್ 24, 2026ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಹೇಶ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಕಿರಣ ಅವರ ತಂಡ ತುಮಕೂರಿನ ಗುಂಗೂರುಮಳೆ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಪ್ರಕರಣದ ಮರು ವಿಚಾರಣೆ ಬಳಿಕ ನ್ಯಾಯಾಧೀಶರಾದ ಶಿವಣ್ಣ ಹೆಚ್.ಆರ್. ಅವರು ಆರೋಪಿಗೆ ಭಾರತೀಯ ದಂಡ ಸಂಹಿತೆಯ 380ನೇ ಕಲಂ ಅಡಿಯಲ್ಲಿ ಒಂದು ವರ್ಷದ ಸಾದಾರಣ ಸಜೆ ಹಾಗೂ ₹1000 ದಂಡ ವಿಧಿಸಿ, ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ 10 ದಿನಗಳ ಜೈಲು ಶಿಕ್ಷೆ ವಿಧಿಸುವಂತೆ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕಿ ಪ್ರೀತಿ ಎಂ.ಸಿ. ಅವರು ಸಮರ್ಥವಾಗಿ ವಾದ ಮಂಡನೆ ನಡೆಸಿದರು.
Previous Post Next Post