ಮಂಗಳೂರು: ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಈ ನಿರ್ಣಾಯಕ ಸಮಯದಲ್ಲಿ ತೃತೀಯ ಭಾಷೆಯ ಅಂಕದ ಪದ್ಧತಿಯನ್ನು ಕೈಬಿಟ್ಟು ಗ್ರೇಡ್ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವು ಅತ್ಯಂತ ಬೇಜವಾಬ್ದಾರಿಯುತವಾದುದು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತೀವ್ರವಾಗಿ ಖಂಡಿಸಿದ್ದಾರೆ.
ವಿದ್ಯಾರ್ಥಿಗಳೇ ಬಲಿಪಶು: ರಾಜಕೀಯ ಹಿತಾಸಕ್ತಿಗಾಗಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಸ್ಕೋರಿಂಗ್ ವಿಷಯವಾಗಿದ್ದ ತೃತೀಯ ಭಾಷೆಯ ನಿಯಮ ಬದಲಾವಣೆಯಿಂದ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಕಂಗಾಲಾಗಿದ್ದಾರೆ.
ಶಿಕ್ಷಕರ ಪ್ರತಿರೋಧ: ಸರ್ಕಾರದ ಈ ನಡೆಯಿಂದ ಅಸಮಾಧಾನಗೊಂಡಿರುವ ಸುಮಾರು 75 ಸಾವಿರಕ್ಕೂ ಹೆಚ್ಚು ತೃತೀಯ ಭಾಷಾ ಶಿಕ್ಷಕರು ಎಸೆಸೆಲ್ಸಿ ಮೌಲ್ಯಮಾಪನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಇದು ಶಿಕ್ಷಣ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಭಾಷೆಗಳಿಗೆ ಅನ್ಯಾಯ: ಈ ನಿರ್ಧಾರದಿಂದ ಹಿಂದಿ ಮಾತ್ರವಲ್ಲದೆ ಸಂಸ್ಕೃತ, ಕೊಂಕಣಿ ಹಾಗೂ ತುಳು ಭಾಷೆಗಳಿಗೂ ಅನ್ಯಾಯವಾಗಲಿದೆ. ಮಕ್ಕಳ ಒಂದು ವರ್ಷದ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಿನ್ನಡೆ: ಮಕ್ಕಳು ಹೆಚ್ಚು ಭಾಷೆಗಳನ್ನು ಕಲಿತಷ್ಟೂ ಅವರ ಭವಿಷ್ಯಕ್ಕೆ ಉತ್ತಮ. ಆದರೆ ಸರ್ಕಾರದ ಇಂತಹ ಕ್ರಮಗಳು ಮುಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಮಕ್ಕಳು ಹಿನ್ನಡೆ ಅನುಭವಿಸುವಂತೆ ಮಾಡುತ್ತದೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಆಗ್ರಹ:
ಯಾವುದೇ ತೀರ್ಮಾನವನ್ನು ಶೈಕ್ಷಣಿಕ ವರ್ಷದ ಆರಂಭದಲ್ಲಿ ತೆಗೆದುಕೊಳ್ಳಬೇಕಿತ್ತು. ಈಗ ಪರೀಕ್ಷಾ ಸಮಯದಲ್ಲಿ ಇಂತಹ ಗೊಂದಲ ಸೃಷ್ಟಿಸಿರುವುದು ಸರ್ಕಾರದ "ಆತುರಗಾರನಿಗೆ ಬುದ್ಧಿಮಟ್ಟ" ಎಂಬಂತಿದೆ.
ಸರ್ಕಾರ ಕೂಡಲೇ ಈ ನಿರ್ಧಾರವನ್ನು ಹಿಂಪಡೆದು ವಿದ್ಯಾರ್ಥಿಗಳ ಹಿತರಕ್ಷಣೆ ಕಾಪಾಡಬೇಕು ಎಂದು ಕಾಮತ್ ಆಗ್ರಹಿಸಿದ್ದಾರೆ.
Post a Comment