Top News

Instagram | ಚಿನ್ನು ಪಾಪು ಸಾವಿನ ಪ್ರಕರಣಕ್ಕೆ ಮತ್ತೊಂದು ತಿರುವು: ಆಪ್ತ ಸ್ನೇಹಿತ ಸಂದೇಶ್ ಕೂಡ ನೇಣಿಗೆ ಶರಣು

ಕಾಸರಗೋಡು: ಸೋಶಿಯಲ್ ಮೀಡಿಯಾದಲ್ಲಿ ‘ಚಿನ್ನು ಪಾಪು’ ಎಂದು ಖ್ಯಾತಿ ಪಡೆದ ಕೆ. ರೇಷ್ಮಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ರೇಷ್ಮಾ ಸಾವಿನ ವಾರದಲ್ಲೇ ಆಕೆಯ ಆಪ್ತ ಸ್ನೇಹಿತನಾಗಿದ್ದ ಸಂದೇಶ್ ಕೂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಕಾಸರಗೋಡು ಜಿಲ್ಲೆಯ ಉಳಿಯತ್ತಡ್ಕ ನಿವಾಸಿಯಾಗಿದ್ದ ಸಂದೇಶ್ ಮೃತ ವ್ಯಕ್ತಿ. ಗಂಡನಿಂದ ದೂರವಾಗಿದ್ದ ರೇಷ್ಮಾ ಕಳೆದ ನಾಲ್ಕು ತಿಂಗಳಿನಿಂದ ಸಂದೇಶ್ ಜೊತೆ ಕಾಸರಗೋಡಿನ ಕೂಡ್ಲು ಆಜಾದ್ ನಗರದಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದಳು ಎಂದು ತಿಳಿದುಬಂದಿದೆ. ವಿಚ್ಛೇದನದ ಬಳಿಕ ತನ್ನ ನಾಲ್ಕು ವರ್ಷದ ಮಗುವನ್ನು ತವರಿನಲ್ಲಿ ಬಿಟ್ಟಿದ್ದ ರೇಷ್ಮಾ ಅವರ ತವರು ಮನೆ ಸುಳ್ಯ ಗಡಿಭಾಗದ ಅಡೂರಿನಲ್ಲಿ ಇದೆ.

26 ವರ್ಷದ ರೇಷ್ಮಾ ಫೆಬ್ರವರಿ 9ರಂದು ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನೆರೆಮನೆಯವರು ಘಟನೆ ಗಮನಿಸಿ ಮಾಹಿತಿ ನೀಡಿದ್ದರು. ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಸಂದೇಶ್ ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು ಎನ್ನಲಾಗಿದೆ. ‘ಚಿನ್ನು ಪಾಪು’ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದ ರೇಷ್ಮಾ ಇನ್‌ಸ್ಟಾಗ್ರಾಂನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರು.

ಘಟನೆಯ ತನಿಖೆಯ ಭಾಗವಾಗಿ ಪೊಲೀಸರು ಸಂದೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿ ಬಂಧನಕ್ಕೂ ಸಿದ್ಧತೆ ನಡೆಸಲಾಗುತ್ತಿತ್ತು. ಆದರೆ ಸಾಕ್ಷ್ಯಾಪಾದನೆ ಹಂತದಲ್ಲೇ ಪ್ರಕರಣ ಮುಂದುವರಿಯುತ್ತಿದ್ದ ವೇಳೆ, ಉಳಿಯತ್ತಡ್ಕದ ಮನ್ನಿಪಾಡಿಯಲ್ಲಿರುವ ತನ್ನ ಮನೆಯಲ್ಲಿ ಸಂದೇಶ್ ಕೂಡ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ರೇಷ್ಮಾ ಸಾವಿನ ನಂತರ ಸಂದೇಶ್ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎನ್ನಲಾಗುತ್ತಿದೆ. ಇಬ್ಬರೂ ಒಟ್ಟಿಗೆ ವಾಸವಿದ್ದ ಹಿನ್ನೆಲೆ ರೇಷ್ಮಾ ಸಾವಿನ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪೋಸ್ಟ್‌ಮಾರ್ಟಂ ವರದಿ ಪ್ರಕಾರ ರೇಷ್ಮಾ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ. ಕೆಲ ಮೂಲಗಳ ಪ್ರಕಾರ ಇಬ್ಬರ ನಡುವೆ ಉಂಟಾದ ಜಗಳವೂ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. 

ಕುಟುಂಬಸ್ಥರು ಕೂಡ ಅನುಮಾನ ವ್ಯಕ್ತಪಡಿಸಿದ್ದರಿಂದ ಪೊಲೀಸರು ವಿಚಾರಣೆ ನಡೆಸಿದ್ದರು.
ಇದೀಗ ಪ್ರಕರಣದ ಸಂಪೂರ್ಣ ಸತ್ಯ ಬಹಿರಂಗವಾಗುವ ಮೊದಲೇ ಸಂದೇಶ್ ಸಾವಿಗೀಡಾಗಿರುವುದು ತನಿಖೆಗೆ ಹೊಸ ಗೊಂದಲವನ್ನುಂಟುಮಾಡಿದೆ. ಪೊಲೀಸರು ಎರಡೂ ಸಾವುಗಳ ಸಂಬಂಧ ತನಿಖೆ ಮುಂದುವರಿಸಿದ್ದಾರೆ.

Post a Comment

Previous Post Next Post