Top News

ಮಂಗಳೂರು : ದಿ.ಡಾ.ಹೆಚ್.ಟಿ. ಮನೋರಮಾ ರಾವ್ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮ

ಮಂಗಳೂರು : ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಂಗಳೂರು ಶಾಖೆ ಹಾಗೂ ಮಹಿಳಾ ವೈದ್ಯರ ಸಂಘದ ಜಂಟಿ ಆಶ್ರಯದಲ್ಲಿ ಮಾನವೀಯ ಮೌಲ್ಯಗಳೊಂದಿಗೆ ವೈದ್ಯಕೀಯ ಸೇವೆ ಸಲ್ಲಿಸಿ ನೂರಾರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಕ್ಷಣ, ತರಬೇತಿ ಹಾಗೂ ಮಾರ್ಗದರ್ಶನ ನೀಡಿದ ಹಿರಿಯ ಗುರು, ನಗರದ ಖ್ಯಾತ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ದಿ. ಡಾ. ಹೆಚ್. ಟಿ. ಮನೋರಮಾ ರಾವ್ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವು ಫೆ. 9ರಂದು ಐಎಂಎ ಡಾ. ಎ.ವಿ. ರಾವ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಸದಾನಂದ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು.
ತುಮಕೂರು ನಗರದ ಖ್ಯಾತ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರು ಹಾಗೂ ಕಸ್ತೂರ್ಬ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ದುರ್ಗಾದಾಸ್ ಅಸ್ರಣ್ಣ ಅವರು ಅತಿಥಿ ಉಪನ್ಯಾಸಕರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ತಮ್ಮ ಉಪನ್ಯಾಸದಲ್ಲಿ ಸಿಝರಿಯನ್ ಶಸ್ತ್ರ ಚಿಕಿತ್ಸೆಯಲ್ಲಿನ ಪ್ರಸ್ತುತ ಬೆಳವಣಿಗೆಗಳು, ಪರಿಕಲ್ಪನೆಗಳು, ಪ್ರಗತಿ ಹಾಗೂ ಅದರ ಸಾಧಕ–ಬಾಧಕಗಳ ಕುರಿತು ವಿವರಿಸಿದರು. ದೇಶದಲ್ಲಿ ವಾರ್ಷಿಕ ಸರಾಸರಿ ಶೇ. 21.5 ಸಿಝರಿಯನ್ ಶಸ್ತ್ರ ಚಿಕಿತ್ಸೆಗಳು ನಡೆಯುತ್ತಿವೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡರು. ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಸೇವೆ ಹಾಗೂ ಸಾಧನೆಗಳನ್ನು ಪರಿಗಣಿಸಿ ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.

ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ನಿವೃತ್ತ ಹಿರಿಯ ಸ್ತ್ರೀರೋಗ ತಜ್ಞೆ ಡಾ.ವಸಂತಿ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ದಿ.ಡಾ.ಮನೋರಮಾ ರಾವ್ ಅವರು ಕೆಎಂಸಿ ವೈದ್ಯಕೀಯ ಕಾಲೇಜಿನಲ್ಲಿ ಶ್ರೇಷ್ಠ ಶಿಕ್ಷಕಿಯಾಗಿ ಹಾಗೂ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರರಾಗಿದ್ದರು ಎಂದು ಸ್ಮರಿಸಿದರು.

ನಗರದ ಲೇಡಿ ಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ದುರ್ಗಪ್ರಸಾದ್ ಎಂ.ಆರ್. ಗೌರವ ಅತಿಥಿಯಾಗಿ ಪಾಲ್ಗೊಂಡು, ದಿ. ಡಾ.ಮನೋರಮಾ ರಾವ್ ಅವರು ಲೇಡಿ ಗೋಶನ್ ಆಸ್ಪತ್ರೆಯಲ್ಲಿ ಸಲ್ಲಿಸಿದ ದೀರ್ಘಕಾಲದ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆಯನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಸದಾನಂದ ಪೂಜಾರಿಯವರು ಸ್ವಾಗತಿಸಿದರು. ಮಹಿಳಾ ವೈದ್ಯರ ಸಂಘದ ಅಧ್ಯಕ್ಷೆ ಡಾ.ಪ್ರೇಮಾ ಡಿ’ಕುನ್‌ಹಾ ಅವರು ದಿ. ಡಾ. ಮನೋರಮಾ ರಾವ್ ಅವರ ವೃತ್ತಿ ಹಾಗೂ ಶೈಕ್ಷಣಿಕ ಸೇವೆ, ಸಾಧನೆಗಳು ಮತ್ತು ಅವರಿಗೆ ಲಭಿಸಿದ ವಿವಿಧ ಪ್ರಶಸ್ತಿಗಳ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ನಗರದ ಜಯಶ್ರೀ ಆಸ್ಪತ್ರೆಯ ಖ್ಯಾತ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಹೆಚ್. ಟಿ. ಜಯಪ್ರಕಾಶ್ ರಾವ್, ಸಂಸ್ಥೆಯ ಚುನಾಯಿತ ಅಧ್ಯಕ್ಷ ಡಾ. ಉಲ್ಲಾಸ್ ಶೆಟ್ಟಿ ಹಾಗೂ ಕೋಶಾಧಿಕಾರಿ ಡಾ. ಜೂಲಿಯನ್ ಸಲ್ದಾನ ಉಪಸ್ಥಿತರಿದ್ದರು. ಡಾ. ಮಧುರಾ ಭಟ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಡಾ. ಪ್ರಕಾಶ್ ಹರಿಶ್ಚಂದ್ರ ಅವರು ವಂದಿಸಿದರು.

Post a Comment

Previous Post Next Post