Top News

ಮದುವೆಗೆ ಮುನ್ನ ದೈಹಿಕ ಸಂಪರ್ಕ ಬೇಡ, ಯಾರನ್ನೂ ನಂಬದಿರಿ ; ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್

ನವದೆಹಲಿ: ಮದುವೆಗೆ ಮುನ್ನ ಹುಡುಗ–ಹುಡುಗಿ ಪರಸ್ಪರ ಸಂಪೂರ್ಣವಾಗಿ ನಂಬುವುದು ಸೂಕ್ತವಲ್ಲ ಎಂದು ಹೇಳಿರುವ Supreme Court of India, ವಿವಾಹಕ್ಕೂ ಮುನ್ನ ದೈಹಿಕ ಸಂಬಂಧಗಳಲ್ಲಿ ತೊಡಗುವಾಗ ಜಾಗರೂಕತೆ ಅಗತ್ಯವೆಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದಾನೆ ಎಂಬ ಮಹಿಳೆಯ ದೂರಿನ ವಿಚಾರಣೆ ವೇಳೆ ನ್ಯಾಯಪೀಠ ಈ ಮಾತುಗಳನ್ನು ಹೇಳಿದೆ. “ಆರೋಪದಲ್ಲಿ ಯಾಕೋ ಅಷ್ಟಾಗಿ ಸತ್ಯ ಕಾಣುತ್ತಿಲ್ಲ. ಇದು ಪರಸ್ಪರ ಒಪ್ಪಿಗೆಯಿಂದ ನಡೆದ ಸಂಬಂಧದಂತಿದೆ. ನಾವು ಹಳೆಯ ಮೈಂಡ್‌ಸೆಟ್‌ನವರಲ್ಲ. ಆದರೆ ಮದುವೆಗೆ ಮುನ್ನ ಅಪರಿಚರಂತೆ ಇದ್ದರೆ ಉತ್ತಮ” ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನಲೆ :
2022ರಲ್ಲಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಇಬ್ಬರು ಪರಿಚಯವಾಗಿದ್ದರು. ಬಳಿಕ ದೆಹಲಿ ಮತ್ತು ದುಬೈನಲ್ಲಿ ಭೇಟಿಯಾಗಿ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದರು ಎನ್ನಲಾಗಿದೆ. ಮದುವೆಯಾಗುವುದಾಗಿ ಭರವಸೆ ನೀಡಿ ಸಂಬಂಧ ಬೆಳೆಸಿಕೊಂಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ, ತನ್ನ ಅನುಮತಿ ಇಲ್ಲದೆ ಖಾಸಗಿ ಕ್ಷಣಗಳ ವಿಡಿಯೋ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬುದೂ ದೂರಿನಲ್ಲಿ ಉಲ್ಲೇಖವಾಗಿದೆ.

“ನಾವು ಹಳೆಯ ಸಂಪ್ರದಾಯದವರಲ್ಲ” – ನ್ಯಾಯಪೀಠ : 
ವಿಚಾರಣೆ ವೇಳೆ ನ್ಯಾಯಮೂರ್ತಿ B. V. Nagarathna, “ನ್ಯಾಯಪೀಠದಲ್ಲಿ ಕೂತಿರುವ ನಾವು ಹಿರಿಯರಾಗಿರಬಹುದು. ಆದರೆ ಈಗಿನ ಕಾಲಘಟ್ಟಕ್ಕೆ ತಕ್ಕಂತೆ ವಿಚಾರಿಸಬೇಕಾಗುತ್ತದೆ. ಸಂಬಂಧ ಎಷ್ಟೇ ಆಪ್ತವಾಗಿರಲಿ, ಮದುವೆಗೆ ಮುನ್ನ ದೈಹಿಕ ಸಂಬಂಧಕ್ಕೆ ಒಪ್ಪಿಕೊಳ್ಳುವುದು ಹೇಗೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ” ಎಂದು ಅಭಿಪ್ರಾಯಪಟ್ಟರು.

ನೀವು ತುಂಬಾ ಜಾಗರೂಕರಾಗಿರಬೇಕಿತ್ತು. ಯಾರನ್ನೂ ಸುಲಭವಾಗಿ ನಂಬಬಾರದು. ಪರಸ್ಪರ ಒಪ್ಪಿಗೆಯ ಸಂಬಂಧ ಮತ್ತು ಮದುವೆಯ ಸುಳ್ಳು ಭರವಸೆ ನಡುವಿನ ವ್ಯತ್ಯಾಸ ಸೂಕ್ಷ್ಮವಾಗಿದೆ ಎಂದು ನ್ಯಾಯಪೀಠ ಗಮನಸೆಳೆದಿದೆ.

“ಈ ಪ್ರಕರಣ ಒನ್‌ಸೈಡೆಡ್ ಎಂದು ನಮಗೆ ಅನಿಸುತ್ತಿಲ್ಲ. ಮಹಿಳೆ ಮದುವೆಯ ಬಗ್ಗೆ ಕಟ್ಟುನಿಟ್ಟಾಗಿದ್ದರೆ, ವಿವಾಹಕ್ಕೂ ಮುನ್ನ ದೈಹಿಕ ಸಂಪರ್ಕ ಬೆಳೆಸಿಕೊಳ್ಳಬಾರದಾಗಿತ್ತು. ಇಂತಹ ಪ್ರಕರಣದಲ್ಲಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ” ಎಂದು ಹೇಳಿದ ನ್ಯಾಯಪೀಠ, ಪ್ರಕರಣವನ್ನು ಸಂಧಾನಕ್ಕೆ ಕಳುಹಿಸಿ ವಿಚಾರಣೆಯನ್ನು ಫೆಬ್ರವರಿ 18ಕ್ಕೆ ಮುಂದೂಡಿದೆ.

Post a Comment

Previous Post Next Post