ಬಜಪೆ ಸುಂಕದಕಟ್ಟೆ ನವರಂಗ ಕಾಂಪೌಂಡ್ ಸಮೀಪ ಕಳೆದ ಆರು ವರ್ಷಗಳಿಂದ ಮಳೆಗಾಲದಲ್ಲಿ ರಸ್ತೆ ಬದಿಯ ಚರಂಡಿಯಲ್ಲಿ ಮಣ್ಣು ತುಂಬಿಕೊಂಡಿರುವುದರಿಂದ ಮಳೆಯ ನೀರು ರಸ್ತೆಯಲ್ಲಿ ಹರಿದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.
ಈ ಸಮಸ್ಯೆಯಿಂದಾಗಿ ಇಲ್ಲಿನ ನಾಗರಿಕರು ವರ್ಷಕ್ಕೆ ಕನಿಷ್ಠ ಎರಡು ಬಾರಿ ತಾತ್ಕಾಲಿಕವಾಗಿ ಮಣ್ಣು ಹಾಕಿ ಸಮಸ್ಯೆ ನಿವಾರಿಸಲು ಮುಂದಾಗುತ್ತಿದ್ದಾರೆ.
ಈ ಸಂಬಂಧ ಊರಿನ ನಾಗರಿಕರು ಸೇರಿ ಪಿಡಬ್ಲ್ಯೂಡಿ ಇಂಜಿನಿಯರನ್ನು ಸ್ಥಳಕ್ಕೆ ಕರೆಸಿ ಚರಂಡಿ ದುರಸ್ತಿ ಹಾಗೂ ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿದೆ.
ಈ ಕುರಿತು ಪಂಚಾಯಿತಿ ವಾರ್ಡ್ ಸಭೆಯಲ್ಲಿಯೂ ಲಿಖಿತವಾಗಿ ಪ್ರಸ್ತಾಪಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಹಣ ಮಂಜೂರಾಗಿದ್ದರೂ ಏಳು ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ ಎಂಬುದಾಗಿ ಸ್ಥಳೀಯ ನಾಗರಿಕರಾದ ಅಬ್ದುಲ್ ಹಮೀದ್ ತಿಳಿಸಿದ್ದಾರೆ.
ಇದೇ ವೇಳೆ ಇತ್ತೀಚೆಗೆ ಪೂರ್ಣಗೊಂಡ ಸೌಹಾರ್ದನಗರದ ಮುಖ್ಯ ರಸ್ತೆಯಲ್ಲಿ ಕಾಂಕ್ರೀಟ್ ಹಾಕದೆ ಮಣ್ಣು ತುಂಬಿಸಿರುವುದರಿಂದ, ಸುಮಾರು 300ಕ್ಕೂ ಅಧಿಕ ಮನೆಗಳಿರುವ ಈ ಪ್ರದೇಶದ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತೀವ್ರ ತೊಂದರೆ ಎದುರಾಗುತ್ತಿದೆ. ವಾಹನಗಳ ಅಡಿವಾಗಕ್ಕೆ ರಸ್ತೆ ತಾಗುತ್ತಿರುವುದರಿಂದ ಮಳೆಗಾಲದಲ್ಲಿ ಭಾರೀ ಅನಾಹುತ ಸಂಭವಿಸುವ ಆತಂಕವಿದೆ ಎಂದು ಅವರು ಹೇಳಿದ್ದಾರೆ.
ಆದ್ದರಿಂದ ಆದಷ್ಟು ಬೇಗ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮತ್ತೊಮ್ಮೆ ಕಳಕಳಿಯ ಮನವಿ ಸಲ್ಲಿಸಲಾಗಿದೆ ಎಂದು ಅಬ್ದುಲ್ ಹಮೀದ್ ಹೇಳಿದರು.
Post a Comment