ಇಂಧನ ಖಾಲಿಯಾದ ಕಾರಣ ಕಲಬುರಗಿಯಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಲಘು ತರಬೇತಿ ವಿಮಾನವು ಭಾನುವಾರ ಮಧ್ಯಾಹ್ನ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದ ಹೊರವಲಯದಲ್ಲಿ ಪತನಗೊಂಡಿದೆ.
ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಗಾಯಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರೆಡ್ ಬರ್ಡ್ ಏವಿಯೇಷನ್ ತರಬೇತಿ ಸಂಸ್ಥೆಗೆ ಸೇರಿದ ಸೆಸ್ನಾ 172 ಮಾದರಿಯ ತರಬೇತಿ ಚಾರ್ಟರ್ ವಿಮಾನವು ಹಾರಾಟದ ವೇಳೆ ಇಂಧನ ಮುಗಿದ ಪರಿಣಾಮ ತುರ್ತು ಲ್ಯಾಂಡಿಂಗ್ ಮಾಡಲು ಯತ್ನಿಸಿದೆ. ಈ ವೇಳೆ ನಿಯಂತ್ರಣ ತಪ್ಪಿ ಗ್ರಾಮದ ಹೊರವಲಯದ ರೈತರ ಜಮೀನಿನಲ್ಲಿ ವಿಮಾನ ಮುಗುಚಿ ಬಿದ್ದಿದೆ.
ವಿಮಾನದಲ್ಲಿ ಫ್ಲೈಟ್ ಕ್ಯಾಪ್ಟನ್ ಕುನಾಲ್ ಮಲ್ಹೋತ್ರಾ ಹಾಗೂ ತರಬೇತಿ ಪಡೆಯುತ್ತಿದ್ದ ಪೈಲಟ್ ಪಿ.ಆರ್. ಗೌತಮ್ ಶಂಕರ ಇದ್ದು, ಇಬ್ಬರಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಬಬಲೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುದ್ದಿ ತಿಳಿದು ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿದ್ದಾರೆ.
Post a Comment