ಮಂಗಳೂರು :“ವೈದ್ಯಕೀಯ ಪ್ರತಿನಿಧಿಗಳು ವಿವಿಧ ವೈದ್ಯಕೀಯ ಕಾರ್ಯಗಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ನಿರಂತರ ಅಧ್ಯಯನ ಹಾಗೂ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು. ನೂತನ ಆವಿಷ್ಕಾರಗಳು ಮತ್ತು ಆಧುನಿಕ ಬೆಳವಣಿಗೆಗಳಿಗೆ ಸ್ಪಂದಿಸಿ ತಮ್ಮ ವೈದ್ಯಕೀಯ ಜ್ಞಾನವನ್ನು ವೃದ್ಧಿಸಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಜೊತೆಗೆ ಸಮಾಜದ ಜನಮನ್ನಣೆಯನ್ನೂ ಗಳಿಸಬಹುದು” ಎಂದು ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ನಿರ್ದೇಶಕರಾದ ಡಾ. ಹಾಜಿ ಯು.ಕೆ. ಮೋನು ಹೇಳಿದರು.
ಅವರು ಕಣಚೂರು ವೈದ್ಯಕೀಯ ಕಾಲೇಜಿನ ಮಕ್ಕಳ ಶಾಸ್ತ್ರ ಮತ್ತು ಚಿಕಿತ್ಸಾ ವಿಭಾಗ, ಔಷಧ ಶಾಸ್ತ್ರ ಹಾಗೂ ಸೂಕ್ಷ್ಮ ಜೀವ ಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ನಿರಂತರ ವೈದ್ಯಕೀಯ ಶಿಕ್ಷಣದ ಅಂಗವಾಗಿ ತಾ. 07-02-2026 ರಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಒಂದು ದಿನದ “ಪುಟ್ಟ ರೋಗಿಗಳು ಮತ್ತು ದೊಡ್ಡ ನಿರ್ಧಾರಗಳು” ಎಂಬ ವೈದ್ಯಕೀಯ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಡೀನ್ ಡಾ. ಶಹನವಾಜ್ ಮಣಿಪಾಡಿ ಮಾತನಾಡಿ, ಈ ಕಾರ್ಯಗಾರದಲ್ಲಿ ರಾಷ್ಟ್ರಮಟ್ಟದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಕ್ಕಳ ಶಾಸ್ತ್ರ ಕ್ಷೇತ್ರದ ಇತ್ತೀಚಿನ ಪ್ರಗತಿ, ಬೆಳವಣಿಗೆಗಳು ಹಾಗೂ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಹಿರಿಯ ಪ್ರಾಧ್ಯಾಪಕ ಡಾ. ಶಂಶಾದ್ ಎ. ಖಾನ್ ಕಾರ್ಯಗಾರದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು.
ಕಾರ್ಯಗಾರದಲ್ಲಿ ಬೆಂಗಳೂರು ಮಣಿಪಾಲ ಆಸ್ಪತ್ರೆಯ ಡಾ. ಭಾಸ್ಕರ್ ಶೆಣೈ ದಿಕ್ಕೂಚಿ ಭಾಷಣ ಮಾಡಿದರು. ಕೊಯಮುತ್ತೂರು ಕೊವೈಯ್ ಆಸ್ಪತ್ರೆಯ ಡಾ. ಅಶ್ವತ್ ದೊರೈಸ್ವಾಮಿ ಟೈಫಾಯ್ಡ್ ರೋಗ ನಿರ್ವಹಣೆ ಕುರಿತು, ಕೊಚ್ಚಿ ಅಮೃತ ವೈದ್ಯಕೀಯ ಕಾಲೇಜಿನ ಡಾ. ಪ್ರಿನ್ಸಿ ಲೂಯಿಸ್ ಪಲಟ್ಟಿಯವರು ಮಕ್ಕಳ ರೋಗಗಳು – ಲಕ್ಷಣಗಳು ಹಾಗೂ ಕಾರಣಗಳ ಬಗ್ಗೆ ಉಪನ್ಯಾಸ ನೀಡಿದರು. ಬೆಂಗಳೂರು ಕಾವೇರಿ ಆಸ್ಪತ್ರೆಯ ಡಾ. ಅಕ್ಷತಾ ರವೀಂದ್ರ ಮಕ್ಕಳಲ್ಲಿ ಅನಾವಶ್ಯಕ ರೋಗನಿರೋಧಕ ಔಷಧ ಬಳಕೆಯ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ವೈದ್ಯಕೀಯ ವೃತ್ತಿಯಲ್ಲಿ ಅನುಪಮ ಸೇವೆ ಸಲ್ಲಿಸಿ ಗಮನಾರ್ಹ ಸಾಧನೆ ಮಾಡಿದ ನಾಲ್ವರು ವೈದ್ಯರನ್ನು ಸನ್ಮಾನಿಸಲಾಯಿತು.
ಮಕ್ಕಳ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಓನೀಲ್ ಫೆರ್ನಾಂಡಿಸ್ ಸ್ವಾಗತಿಸಿದರು. ವೇದಿಕೆಯಲ್ಲಿ ಡಾ. ಎಂ.ವಿ. ಪ್ರಭು, ಡಾ. ಅಂಜನ್ ಕುಮಾರ್, ಡಾ. ರೋಹನ್ ಮೋನಿಸ್, ಡಾ. ಮನೋಹರ್ ರೇವಂಕರ್, ಡಾ. ಯಶ್ವಂತ್ ಕುಮಾರ್ ಉಪಸ್ಥಿತರಿದ್ದರು.
ಡಾ. ಡೈಲಾನ್ ಡಿ’ಸೋಜಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ವಂದಿಸಿದರು. ಈ ಕಾರ್ಯಗಾರವು ಸುಮಾರು 150 ವೈದ್ಯಕೀಯ ಪ್ರತಿನಿಧಿಗಳ ಗಮನ ಸೆಳೆಯಿತು.
Post a Comment