ಮಂಗಳೂರು, ಫೆ. 24: Rotary Club of Mangalore City ಆಶ್ರಯದಲ್ಲಿ Rotary International ಸಂಸ್ಥೆಯ 121ನೇ ಸ್ಥಾಪನಾ ದಿನಾಚರಣೆ ಹಾಗೂ ಸಾಧಕರಿಗೆ ಶ್ರೇಷ್ಠ ವೃತ್ತಿಪರ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭವು ಫೆ. 23ರಂದು ನಗರದ ಆಫಿಸರ್ಸ್ ಕ್ಲಬ್ ಸಭಾಂಗಣದಲ್ಲಿ ಜರುಗಿತು.
ಸಂಸ್ಥೆಯ ಅಧ್ಯಕ್ಷೆ ರೋ. ಸಜ್ಞಾ ಭಾಸ್ಕರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕಸ್ತೂರಿ ಬಾಲಕೃಷ್ಣ ಪೈ ಅವರಿಗೆ ಶ್ರೇಷ್ಠ ವೃತ್ತಿಪರ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಅಧ್ಯಕ್ಷೀಯ ಭಾಷಣದಲ್ಲಿ ರೋ. ಸಜ್ಞಾ ಭಾಸ್ಕರ್ ಅವರು ರೋಟರಿ ಸಂಸ್ಥೆಯ ವೃತ್ತಿಪರ ಸೇವಾ ಮಾಸಾಚರಣೆಯ ಮಹತ್ವ ಮತ್ತು ಉದ್ದೇಶವನ್ನು ವಿವರಿಸಿದರು. ಸಮಾಜಕ್ಕೆ ನಿಸ್ವಾರ್ಥ, ಪ್ರಾಮಾಣಿಕ ಹಾಗೂ ಸಮರ್ಪಿತ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವುದು ರೋಟರಿಯ ಪ್ರಮುಖ ಉದ್ದೇಶವೆಂದು ತಿಳಿಸಿದರು.
ಸುಮಾರು 50 ವರ್ಷಗಳ ಕಾಲ ಕ್ರಿಕೆಟ್ ಆಟಗಾರ, ಯುವಕರಿಗೆ ತರಬೇತುದಾರ, ಪಂದ್ಯಾಟಗಳಲ್ಲಿ ತೀರ್ಪುಗಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕ್ರಿಕೆಟ್ ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ ಬಾಲಕೃಷ್ಣ ಪೈ ಅವರ ಅಪಾರ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಯಿತು. ವಿವಿಧ ಸ್ಪರ್ಧಾ ಪಂದ್ಯಾಟಗಳನ್ನು ಯಶಸ್ವಿಯಾಗಿ ಆಯೋಜಿಸಿರುವುದಕ್ಕೂ ಅವರನ್ನು ಅಭಿನಂದಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಪೈ ಅವರು ಸಾಧಕರನ್ನು ಗುರುತಿಸಿ ಸನ್ಮಾನಿಸುವ ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯವೆಂದು ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಲಯ ಸಹಾಯಕ ಗವರ್ನರ್ ರೋ. ಡಾ. ರವಿಶಂಕರ್ ರಾವ್ ಅವರು 1905ರ ಫೆ. 23ರಂದು ಅಮೆರಿಕದ Chicago ನಗರದಲ್ಲಿ ರೋಟರಿ ಸಂಸ್ಥೆ ಸ್ಥಾಪನೆಯಾದ ಹಿನ್ನೆಲೆ, ಅದರ ಇತಿಹಾಸ, ಬೆಳವಣಿಗೆ ಹಾಗೂ ಸಮಾಜ ಸೇವಾ ಸಾಧನೆಗಳ ಬಗ್ಗೆ ವಿವರಿಸಿದರು. ಇದು ರೋಟರಿ ಸದಸ್ಯರಿಗೆ ಸಂಭ್ರಮದ ಹಾಗೂ ಚಿರಸ್ಮರಣೀಯ ದಿನವೆಂದು ಹೇಳಿದರು.
ಸ್ಥಾಪನಾ ಅಧ್ಯಕ್ಷ ರೋ. ಡಾ. ರಂಜನ್ ಅವರು ಪ್ರಶಸ್ತಿ ವಿಜೇತರ ಪರಿಚಯ ನೀಡಿ, ಕ್ರಿಕೆಟ್ ಕ್ಷೇತ್ರಕ್ಕೆ ಪೈ ಅವರ ಅನುಪಮ ಸೇವೆ ಅಪಾರ ಮತ್ತು ಅಮೂಲ್ಯವೆಂದು ಅಭಿನಂದಿಸಿದರು.
ವೇದಿಕೆಯಲ್ಲಿ ವೃತ್ತಿಪರ ಸೇವಾ ಯೋಜನೆಯ ನಿರ್ದೇಶಕ ನಿತಿನ್ ದೇವಾಡಿಗ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಜೀರ್ ಪದ್ಮನಾಭ ನಾಯ್ಕ ವರದಿ ಮಂಡಿಸಿ ವಂದಿಸಿದರು.
Post a Comment