ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ 16 ವರ್ಷದ ಪ್ರಥಮ ಪಿಯುಸಿ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿದ ಘಟನೆ ಇಂದು ಬೆಳಿಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎಂದಿನಂತೆ ಸ್ಕೂಟಿಯಲ್ಲಿ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ECO ಕಾರಿನಲ್ಲಿ ಬಂದ ಮೂವರು ಮಾಸ್ಕ್ ಧಾರಿಗಳು ಅಡ್ಡಗಟ್ಟಿ, ಚೂರಿ ತೋರಿಸಿ ಬಲವಂತವಾಗಿ ಕಾರಿಗೆ ಎಳೆದು ಕೂರಿಸಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವೇಳೆ ವಿದ್ಯಾರ್ಥಿನಿ ಕಿರುಚಾಡಿದ್ದು, ಆರೋಪಿಗಳು ಚೂರಿಯಿಂದ ಆಕೆಯ ಕೈಗೆ ಗಾಯಗೊಳಿಸಿದ್ದಾರೆ ಎನ್ನಲಾಗಿದೆ.
ಈ ದೃಶ್ಯವನ್ನು ಗಮನಿಸಿದ ಹಿಂದಿನಿಂದ ಬರುತ್ತಿದ್ದ ಅಬ್ಬುಸಾಲಿ ಎಂಬವರು ತಕ್ಷಣ ಯುವತಿಯನ್ನು ರಕ್ಷಿಸಲು ಮುಂದಾದಾಗ, ಕಾರಿನಲ್ಲಿ ಇದ್ದ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಗಾಯಗೊಂಡ ವಿದ್ಯಾರ್ಥಿನಿಯನ್ನು ಅಬ್ಬುಸಾಲಿಯವರು ತಕ್ಷಣ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
Post a Comment