ನಂತೂರು ವೃತ್ತದಲ್ಲಿ ಭೀಕರ ಅಪಘಾತ: ಸ್ಕೂಟರ್‌ಗೆ ಖಾಸಗಿ ಬಸ್ ಡಿಕ್ಕಿ, ಯುವತಿ ಮೃತ್ಯು

ಮಂಗಳೂರು : ನಗರದ ನಂತೂರು ವೃತ್ತದ ಬಳಿ ಸ್ಕೂಟರ್‌ಗೆ ಖಾಸಗಿ ಬಸ್ ಡಿಕ್ಕಿಯಾಗಿ, ಹಿಂಬದಿ ಸವಾರೆಯಾಗಿದ್ದ ಯುವತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಸಂಭವಿಸಿದೆ.
ಮೃತ ಯುವತಿಯನ್ನು ಬಳ್ಳಾಲ್‌ಬಾಗ್ ನಿವಾಸಿ ದೀಪ್ತಿ (26) ಎಂದು ಗುರುತಿಸಲಾಗಿದೆ. 

ದೀಪ್ತಿ ತಮ್ಮ ಭಾವಿ ಪತಿಯೊಂದಿಗೆ ಶಿವಭಾಗ್ ಕಡೆಯಿಂದ ಸ್ಕೂಟರ್‌ನಲ್ಲಿ ವಾಮಂಜೂರು ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.
ಈ ವೇಳೆ ಕದ್ರಿ–ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಸಾಗುತ್ತಿದ್ದ ಕುಡುಪು ಮಾರ್ಗದ 22ನೇ ಸಂಖ್ಯೆಯ ಖಾಸಗಿ ಬಸ್ ಸ್ಕೂಟರ್‌ಗೆ ತಾಗಿದ್ದು, ಹಿಂಬದಿ ಸವಾರೆಯಾಗಿದ್ದ ದೀಪ್ತಿ ರಸ್ತೆಗೆ ಬಿದ್ದಿದ್ದಾರೆ. ತಕ್ಷಣವೇ ಬಸ್ ಆಕೆಯ ಹೊಟ್ಟೆಯ ಮೇಲೆ ಹರಿದ ಪರಿಣಾಮ ಗಂಭೀರ ಗಾಯಗೊಂಡ ದೀಪ್ತಿಯನ್ನು ಎಜೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.

ಸ್ಕೂಟರ್ ಚಲಾಯಿಸುತ್ತಿದ್ದ ಯುವಕ ಅಪಾಯದಿಂದ ಪಾರಾಗಿದ್ದಾನೆ. ನಂತೂರು ಬಸ್ ನಿಲ್ದಾಣದ ಎದುರಲ್ಲೇ ಈ ಘಟನೆ ಸಂಭವಿಸಿದೆ. ಬಸ್ ವೇಗವಾಗಿತ್ತೇ ಅಥವಾ ಸ್ಕೂಟರ್ ಬಲಭಾಗದಿಂದ ಎದುರಿಗೆ ಬಂದಿತ್ತೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎಂದು ಕದ್ರಿ ಪೊಲೀಸರು ತಿಳಿಸಿದ್ದಾರೆ.

ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ದೀಪ್ತಿ ಮತ್ತು ಯುವಕ ವಾಮಂಜೂರಿನಲ್ಲಿ ನಡೆಯುವ ಬರ್ತ್‌ಡೇ ಪಾರ್ಟಿಗೆ ತೆರಳುತ್ತಿದ್ದರೆಂದು ತಿಳಿದುಬಂದಿದೆ.

Post a Comment

Previous Post Next Post