ಬೆಂಗಳೂರು : ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಮೀರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ (ಜ. 7) ಅತಿ ಹೆಚ್ಚು ಅವಧಿಗೆ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಎಂಬ ಹೊಸ ಗರಿಮೆಗೆ ಪಾತ್ರರಾಗಿದ್ದಾರೆ.
ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನೂ ಸಿದ್ದರಾಮಯ್ಯ ಹೊಂದಿದ್ದಾರೆ. ಈಗಾಗಲೇ 16 ಬಾರಿ ಬಜೆಟ್ ಮಂಡಿಸಿರುವ ಅವರು, 2026–27ನೇ ಸಾಲಿನಲ್ಲಿ ತಮ್ಮ 17ನೇ ಬಜೆಟ್ ಮಂಡಿಸಲು ಉತ್ಸುಕರಾಗಿದ್ದಾರೆ.
‘ಸಾಮಾಜಿಕ ನ್ಯಾಯ’ದ ನಾಯಕನಾಗಿ ಗುರುತಿಸಿಕೊಂಡಿದ್ದ ದೇವರಾಜ ಅರಸು ಅವರು ಎರಡು ಅವಧಿಯಲ್ಲಿ ಒಟ್ಟು 2,789 ದಿನಗಳು (7 ವರ್ಷ 239 ದಿನ) ಮುಖ್ಯಮಂತ್ರಿ ಆಗಿದ್ದರು. ಅರಸು ಅವರು 1972ರ ಮಾರ್ಚ್ 20ರಿಂದ 1980ರ ಜನವರಿ 7ರವರೆಗೆ ಸತತ ಏಳೂವರೆ ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.
ಸಿದ್ದರಾಮಯ್ಯ ಅವರು 2013ರಿಂದ 2018ರವರೆಗೆ ಮೊದಲ ಬಾರಿ 1,829 ದಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 2023ರ ಮೇ 20ರಂದು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿಯ ಅಧಿಕಾರಾವಧಿಯನ್ನು ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಲೆಕ್ಕ ಹಾಕಲಾಗುತ್ತದೆ ಎಂದು ವಿಧಾನಸಭೆ ಸಚಿವಾಲಯದ ಮೂಲಗಳು ತಿಳಿಸಿವೆ.
ಅರಸು ಹಾಗೂ ಸಿದ್ದರಾಮಯ್ಯ ಇಬ್ಬರೂ ತಮ್ಮ ವರ್ಚಸ್ಸು ಮತ್ತು ಸಂಘಟನಾ ಚಾತುರ್ಯದ ಮೂಲಕ ರಾಜ್ಯ ರಾಜಕೀಯದಲ್ಲಿ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತ ಸಮುದಾಯಗಳ ಅಹಿಂದ ಸಂಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡವರು ಎಂಬ ಹೆಗ್ಗಳಿಕೆ ಇಬ್ಬರಿಗೂ ಇದೆ.
ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ‘ಪಂಚ ಗ್ಯಾರಂಟಿ’ಗಳನ್ನು ಅನುಷ್ಠಾನಗೊಳಿಸಿದೆ.
ಜನತಾಪಕ್ಷ, ಜನತಾದಳದ ಮೂಲಕ ರಾಜಕೀಯ ಜೀವನ ಆರಂಭಿಸಿದ ಸಿದ್ದರಾಮಯ್ಯ, 2006ರಿಂದ ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿದಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರ ಪಟ್ಟಿಯಲ್ಲಿ ದೇವರಾಜ ಅರಸು ನಂತರ ಎಸ್. ನಿಜಲಿಂಗಪ್ಪ (7 ವರ್ಷ 175 ದಿನ), ರಾಮಕೃಷ್ಣ ಹೆಗಡೆ (5 ವರ್ಷ 216 ದಿನ) ಹಾಗೂ ಬಿ.ಎಸ್. ಯಡಿಯೂರಪ್ಪ (5 ವರ್ಷ 82 ದಿನ) ಇದ್ದಾರೆ.
Post a Comment