ಮಂಗಳೂರು: RockStar ರೂಪೇಶ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ “ಜೈ” ಸಿನಿಮಾ ತುಳು ಮತ್ತು ಕನ್ನಡ ಭಾಷೆಗಳಲ್ಲಿ ಇತಿಹಾಸ ನಿರ್ಮಿಸಿದೆ. ಮೊದಲ ದಿನವೇ 1,020 ಪ್ರದರ್ಶನಗಳನ್ನು ಕಂಡು ದಾಖಲೆ ಬರೆದಿರುವ ಈ ಸಿನಿಮಾ, ಕೇವಲ 5 ದಿನಗಳಲ್ಲಿ ರೂ.3.20 ಕೋಟಿಗಿಂತಲೂ ಹೆಚ್ಚು ಸಂಗ್ರಹಿಸಿ ಗಮನ ಸೆಳೆದಿದೆ.
ಡಬ್ಬಿಂಗ್ ಹಕ್ಕುಗಳು, ಆಡಿಯೋ ಹಕ್ಕುಗಳು ಹಾಗೂ ಪ್ರೀಮಿಯರ್ ಶೋಗಳಿಂದಲೂ ದೊಡ್ಡ ಮಟ್ಟದ ಆದಾಯ ಲಭ್ಯವಾಗಿದೆ.
ಚಿತ್ರವನ್ನು ಕುಟುಂಬ ಸಮೇತ, ಶಾಲಾ ಮಕ್ಕಳೂ ಉತ್ಸಾಹದಿಂದ ವೀಕ್ಷಿಸುತ್ತಿದ್ದು, ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
“ಹಿರಿಯರು ನೀಡಿದ ಮಾರ್ಗದರ್ಶನ, ಅವರ ಅನುಭವ ಮತ್ತು ನಮ್ಮ ತಂಡದ ಶ್ರಮ—ಇವೆಲ್ಲದರ ಪ್ರೇರಣೆಯಿಂದ ಜೈ ಮೂಡಿ ಬಂದಿದೆ. ನಮ್ಮ ಕನಸು ಹಾಗೂ ಭಕ್ತಿಯಿಂದ ಮಾಡಿದ ದುಡಿಮೆ ಫಲಿಸಿದೆ,” ಎಂದು ರೂಪೇಶ್ ಶೆಟ್ಟಿ ತಿಳಿಸಿದ್ದಾರೆ.
ತುಳು ಚಿತ್ರರಂಗದಲ್ಲಿ ಬಿಗ್ ಬಜೆಟ್‌ನಲ್ಲೇ ಮೂಡಿ ಬಂದಿರುವ ಜೈ, ಜಿಲ್ಲೆಯ ಹಲವು ಖ್ಯಾತ ಕಲಾವಿದರನ್ನು ಒಳಗೊಂಡಿದೆ. ಗಿರಿಗಿಟ್ ಮತ್ತು ಸರ್ಕಸ್ ಸಿನೆಮಾಗಳ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಮತ್ತೊಮ್ಮೆ ನಿರ್ದೇಶನದ ಕಸರತ್ತು ತೋರಿದ್ದಾರೆ. ವಿಶೇಷವಾಗಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪಾತ್ರ ಚಿತ್ರಕ್ಕೆ ಹೆಚ್ಚುವರಿ ಬಲ ನೀಡಿದೆ.
ಆರ್‌ಎಸ್ ಸಿನಿಮಾಸ್, ಶೂಲಿನ್ ಫಿಲಂಸ್ ಮತ್ತು ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣಗೊಂಡ ಈ ಚಿತ್ರಕ್ಕೆ ಕಥೆ–ಸಂಭಾಷಣೆ ಪ್ರಸನ್ನ ಶೆಟ್ಟಿ ಬೈಲೂರು, ಚಿತ್ರಕತೆ ರೂಪೇಶ್ ಶೆಟ್ಟಿ ಹಾಗೂ ವೇಣು ಹಸ್ರಳ್ಳಿ ಅವರದ್ದು. ಕ್ಯಾಮೆರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ, ಸಂಕಲನ ರಾಹುಲ್ ವಸಿಷ್ಠ ಮತ್ತು ನೃತ್ಯ ನಿರ್ದೇಶನ–ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ನವೀನ್ ಶೆಟ್ಟಿ ಆರ್ಯನ್ಸ್ ವಹಿಸಿದ್ದಾರೆ.
ಸುನೀಲ್ ಶೆಟ್ಟಿ ಜೊತೆಗೆ ಡಾ. ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಮನೋಜ್ ಚೇತನ್ ಡಿ.ಸೋಜಾ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ. ನಾಯಕಿಯಾಗಿ ಅದ್ವಿತಿ ಶೆಟ್ಟಿ ಪಾತ್ರ ನಿರ್ವಹಿಸಿದ್ದಾರೆ.
ತುಳು ಚಿತ್ರರಂಗದ ಮಟ್ಟವನ್ನು ಮತ್ತೊಂದು ಹಂತಕ್ಕೆ ಏರಿಸಿರುವ ಚಿತ್ರವೆಂದು ಪ್ರೇಕ್ಷಕರು ಜೈಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Post a Comment