ಮಂಗಳೂರು: MRPL ಘಟಕದಲ್ಲಿ ಕೆಲವು ದಿನಗಳ ಹಿಂದೆ ಸಂಭವಿಸಿದ್ದ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸುರತ್ಕಲ್ನ ಗುತ್ತಿಗೆ ಕಾರ್ಮಿಕ ರಾಜೇಶ್ ಡಿ’ಸಿಲ್ವಾ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರೊಂದಿಗೆ ಮಂಗಳೂರನ್ನೇ ಬೆಚ್ಚಿಬೀಳಿಸಿದ್ದ MRPL ಸ್ಫೋಟ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
MRPL ಆಡಳಿತದ ಹೊಣೆಗೇಡಿತನ ಹಾಗೂ ಸುರಕ್ಷತಾ ವೈಫಲ್ಯದಿಂದ ಯುವ ಕಾರ್ಮಿಕ ರಾಜೇಶ್ ಡಿ’ಸಿಲ್ವಾ ಅವರು ಬಲಿಯಾಗಿದ್ದಾರೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಮೃತ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ನೀಡಿದ ಮಾದರಿಯಲ್ಲೇ ರಾಜೇಶ್ ಅವರ ಕುಟುಂಬಕ್ಕೂ ₹1.20 ಕೋಟಿ ಪರಿಹಾರ ಧನವನ್ನು MRPL ಆಡಳಿತ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ದುರಂತಕ್ಕೆ ಕಾರಣವಾದ ಅಂಶಗಳ ಕುರಿತು ಸಿದ್ಧಪಡಿಸಲಾದ ಪ್ರಾಥಮಿಕ ತನಿಖಾ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಅಲ್ಲದೆ, ನಾಗರಿಕ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯ ಮೂಲಕ ಸ್ಫೋಟದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜೇಶ್ ಡಿ’ಸಿಲ್ವಾ ಮತ್ತು ಮನೀಶ್ ಕರ್ಕಡ ಅವರ ಕುಟುಂಬದ ಸದಸ್ಯರಿಗೆ MRPLನಲ್ಲಿ ನೇರ ಉದ್ಯೋಗ ಕಲ್ಪಿಸಬೇಕು. ಸ್ಫೋಟದ ತೀವ್ರತೆಗೆ ಹಾನಿಗೊಳಗಾಗಿರುವ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳ ಆಸ್ತಿಪಾಸ್ತಿಗಳಿಗೆ ನ್ಯಾಯಯುತ ಪರಿಹಾರವನ್ನು ವಿಳಂಬವಿಲ್ಲದೆ ವಿತರಿಸಬೇಕು ಎಂದು ಸಿಪಿಐಎಂ ಆಗ್ರಹಿಸಿದೆ.
ಮಂಗಳೂರಿನ ಧಾರಣಾ ಸಾಮರ್ಥ್ಯ ಹಾಗೂ MRPL ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ದಟ್ಟ ಜನವಸತಿಯನ್ನು ಗಮನದಲ್ಲಿಟ್ಟುಕೊಂಡು, MRPLನ ನಾಲ್ಕನೇ ಹಂತದ ವಿಸ್ತರಣಾ ಯೋಜನೆಯನ್ನು ಸರ್ಕಾರ ಕೈಬಿಡಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರು ಪ್ರಕಟಣೆ ನೀಡಿದ್ದಾರೆ.
Post a Comment