ಹಿರಿಯ ಹುಲಿವೇಷಧಾರಿ ‘ಪಿಲಿ ಅಣ್ಣು’ ಅವರಿಗೆ ತುಳು ಅಕಾಡೆಮಿಯ ‘ಚಾವಡಿ ತಮ್ಮನ’ ಗೌರವ ; 55 ವರ್ಷಗಳ ಹುಲಿವೇಷ ಸೇವೆಗೆ ಸಂದ ಸನ್ಮಾನ; 81ರ ಹರೆಯದ ಗಂಗಾಧರ ದೇವಾಡಿಗರಿಗೆ ಗೌರವ ಸಮರ್ಪಣೆ

ಮಂಗಳೂರು : ಕಳೆದ 55 ವರ್ಷಗಳಿಂದ ಹುಲಿವೇಷ ಕಲೆಯ ಮೂಲಕ ತುಳುನಾಡಿನ ಜಾನಪದ ಸಂಸ್ಕೃತಿಗೆ ಸೇವೆ ಸಲ್ಲಿಸುತ್ತಿರುವ 81ರ ಹರೆಯದ ಹಿರಿಯ ಹುಲಿವೇಷಧಾರಿ ಗಂಗಾಧರ ದೇವಾಡಿಗ ಕದ್ರಿ (ಪಿಲಿ ಅಣ್ಣು) ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ‘ಚಾವಡಿ ತಮ್ಮನ’ ಗೌರವವನ್ನು ಭಾನುವಾರ ಪ್ರದಾನ ಮಾಡಲಾಯಿತು.

ಮಂಗಳೂರಿನ ಮಣ್ಣಗುಡ್ಡೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಗೌರವ ಸಮರ್ಪಣಾ ಕಾರ್ಯಕ್ರಮ ನಡೆಯಿತು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಶೆಟ್ಟಿ ಅವರು ‘ಚಾವಡಿ ತಮ್ಮನ’ ಗೌರವ ಪ್ರದಾನ ಮಾಡಿ ಮಾತನಾಡಿ, ತುಳು ಭಾಷೆಯನ್ನು ರಾಜ್ಯದ ಎರಡನೇ ಆಡಳಿತ ಭಾಷೆಯನ್ನಾಗಿ ಘೋಷಿಸಿರುವ ಸಂದರ್ಭದಲ್ಲಿ ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳಿಗೆ ಮತ್ತಷ್ಟು ಮನ್ನಣೆ ದೊರೆತಂತಾಗಿದೆ. ಹಿರಿಯ ಹುಲಿವೇಷಧಾರಿ ಪಿಲಿ ಅಣ್ಣು ಅವರನ್ನು ಗೌರವಿಸುವ ಮೂಲಕ ತುಳು ಅಕಾಡೆಮಿ ತುಳುನಾಡಿನ ಸಾಂಪ್ರದಾಯಿಕ ಕಲೆಗೆ ಸೂಕ್ತ ಗೌರವ ಸಲ್ಲಿಸಿದೆ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡಿನ ಅಪೂರ್ವ ಜಾನಪದ ಕಲೆಯಾದ ಹುಲಿವೇಷವನ್ನು ಬೆಳೆಸುವಲ್ಲಿ ಪಿಲಿ ಅಣ್ಣು ಅವರಂತಹ ಹಿರಿಯ ಕಲಾವಿದರ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು.

ಗೌರವ ಸ್ವೀಕರಿಸಿದ ಪಿಲಿ ಅಣ್ಣು ಅವರು ಹುಲಿವೇಷ ಕಲೆಯೊಂದಿಗಿನ ತಮ್ಮ ಅನುಭವ ಹಾಗೂ ಸೇವೆಯ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು.
ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ ಹಾಗೂ ಮಣ್ಣಗುಡ್ಡೆ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಶುಭ ಹಾರೈಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ಞೇಶ್ವರ ಬರ್ಕೆ, ಬಳ್ಳಾಲ್‌ಬಾಗ್ ಫ್ರೆಂಡ್ಸ್ ಅಧ್ಯಕ್ಷ ರಕ್ಷಿತ್ ಕೊಟ್ಟಾರಿ, ಶಾಲೆಯ ಮುಖ್ಯೋಪಾಧ್ಯಾಯಿನಿ ನಳಿನಿ ಪಿ. ಶೆಟ್ಟಿ ಹಾಗೂ ಉರ್ವ ಕೊರಗತನಿಯ ಕ್ಷೇತ್ರದ ಅಧ್ಯಕ್ಷ ರಾಜೇಶ್ ಉರ್ವ ಉಪಸ್ಥಿತರಿದ್ದರು.

ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಅದ್ಯಪಾಡಿ ಸನ್ಮಾನ ಪತ್ರ ವಾಚಿಸಿದರು. ಗಣೇಶ್ ಕುಮಾರ್ ವಂದಿಸಿದರು.

Post a Comment

Previous Post Next Post