ಪಿಲಿನಲಿಕೆ-11 : ₹10 ಲಕ್ಷ ರೂ. ಪ್ರಥಮ ಬಹುಮಾನ; ಎಲ್ಲಾ ತಂಡಗಳಿಗೆ ₹50 ಸಾವಿರ ಪ್ರೋತ್ಸಾಹಧನ ; ದಿನೇಶ್ ಕಾರ್ತಿಕ್, ಗ್ರೇಟ್ ಕಾಲಿ, ಉನ್ನಿ ಮುಕುಂದನ್, ರಿಷಬ್ ಶೆಟ್ಟಿ ಸೇರಿ ಹಲವು ಗಣ್ಯರು ಭಾಗಿ

ಮಂಗಳೂರು, ಅ.17:  ತುಳುನಾಡಿನ ಜಾನಪದ ಕಲೆ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಹುಲಿವೇಷ ಕುಣಿತವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಮಂಗಳೂರಿನಲ್ಲಿ ‘ಪಿಲಿನಲಿಕೆ-11’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪಿಲಿನಲಿಕೆ ಪ್ರತಿಷ್ಠಾನ (ರಿ.), ಮಂಗಳೂರು ವತಿಯಿಂದ ನಮ್ಮ ಟಿವಿಯ ಸಹಯೋಗದಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಲಕ್ಷಾಂತರ ರೂಪಾಯಿ ಬಹುಮಾನ ಘೋಷಿಸಲಾಗಿದ್ದು, ಪ್ರತಿಯೊಂದು ಭಾಗವಹಿಸುವ ತಂಡಕ್ಕೂ ₹50 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 
ಮಂಗಳೂರಿನಲ್ಲಿ ಅಕ್ಟೋಬರ್ 20ರಂದು ಬೆಳಿಗ್ಗೆ 10 ಗಂಟೆಗೆ ಕರಾವಳಿ ಉತ್ಸವ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ತುಳುನಾಡಿನ ಹುಲಿವೇಷದ ವೈಭವವನ್ನು ಜನರಿಗೆ ಪರಿಚಯಿಸುವುದರ ಜತೆಗೆ ಕಲಾವಿದರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.

ಪ್ರಥಮ ಬಹುಮಾನ ₹10 ಲಕ್ಷ :
ಪಿಲಿನಲಿಕೆ-11 ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗಾಗಿ ಪ್ರಥಮ ಬಹುಮಾನವಾಗಿ ₹10 ಲಕ್ಷ, ದ್ವಿತೀಯ ಬಹುಮಾನವಾಗಿ ₹5 ಲಕ್ಷ ಹಾಗೂ ತೃತೀಯ ಬಹುಮಾನವಾಗಿ ₹3 ಲಕ್ಷ ಘೋಷಿಸಲಾಗಿದೆ.

ಇದರೊಂದಿಗೆ ವೈಯಕ್ತಿಕ ವಿಭಾಗಗಳಲ್ಲಿಯೂ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ. ಅತ್ಯುತ್ತಮ ಮರಿಹುಲಿ, ಕರಿಹುಲಿ, ಮುಡಿ, ತಾಸೆ, ಬಣ್ಣಗಾರಿಕೆ ಹಾಗೂ ಹುಲಿ ಕುಣಿತ ವಿಭಾಗಗಳಲ್ಲಿ ಸಾಧನೆ ಮಾಡಿದವರಿಗೆ ತಲಾ ₹50 ಸಾವಿರ ಬಹುಮಾನ ನೀಡುವ ಯೋಜನೆ ಇದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೂ ₹50 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ.

ಕ್ರೀಡೆ ಮತ್ತು ಚಿತ್ರರಂಗದ ಗಣ್ಯರಿಗೆ ಸನ್ಮಾನ : ಪಿಲಿನಲಿಕೆ-11 ಕಾರ್ಯಕ್ರಮಕ್ಕೆ ಕ್ರಿಕೆಟ್ ಕ್ಷೇತ್ರದ ದಿಗ್ಗಜ ದಿನೇಶ್ ಕಾರ್ತಿಕ್, ಗ್ರೇಟ್ ಕಾಲಿ, ಮಲಯಾಳಂ ಚಿತ್ರರಂಗದ ನಟ ಉನ್ನಿ ಮುಕುಂದನ್ ಹಾಗೂ ಕನ್ನಡ ಚಿತ್ರರಂಗದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ತುಳು ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರಿಗೂ ಗೌರವ ಸಲ್ಲಿಸುವ ಯೋಜನೆ ರೂಪಿಸಲಾಗಿದೆ.

ಎಂಎಂಎ ಫೈಟರ್ ನಿಖಿಲ್ ಶೆಟ್ಟಿ, ಅಥ್ಲೀಟ್ ಪೂವಮ್ಮ, ಕೀರ್ತನಾ ಪೂಜಾರಿ ಹಾಗೂ ಕುದ್ರೋಳಿಯ ರಂಗೋಲಿ ರಚಿಸಿದ ಪಿಕ್ಸೆನ್ಸಿಲ್ ತಂಡ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು  ಸನ್ಮಾನಿಸಲಾಗುವುದು. 

ಪಿಲಿನಲಿಕೆ-11 ಕೇವಲ ಸ್ಪರ್ಧೆಯಾಗಿರದೆ, ತುಳುನಾಡಿನ ಜಾನಪದ ಪರಂಪರೆ, ಕಲಾವಿದರ ಪ್ರತಿಭೆ ಹಾಗೂ ಸಾಂಸ್ಕೃತಿಕ ವೈಭವವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಕಾರ್ಯಕ್ರಮವಾಗಲಿದೆ. ಹುಲಿವೇಷ ಕಲೆಗೆ ಹೆಚ್ಚಿನ ಮನ್ನಣೆ ದೊರಕಿಸುವುದರ ಜತೆಗೆ ಕಲಾವಿದರಿಗೆ ಆರ್ಥಿಕ ಮತ್ತು ಸಾಮಾಜಿಕ ಪ್ರೋತ್ಸಾಹ ನೀಡುವ ವೇದಿಕೆಯಾಗಿದೆ ಎಂದರು.


ನಮ್ಮ ಟಿವಿಯ ಆಡಳಿತ ನಿರ್ದೇಶಕ ಡಾ.ಶಿವಶರಣ್ ಶೆಟ್ಟಿ, ಪಿಲಿ ನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಎಂ.ಮಿಥುನ್ ರೈ, ವಿಕಾಸ್ ಶೆಟ್ಟಿ, ಅವಿನಾಶ್ ಸುವರ್ಣ, ಆನಂದ್ ಶೆಟ್ಟಿ, ನವೀನ್ ಶೆಟ್ಟಿ ಎಡ್ಮೆಮಾರ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

Previous Post Next Post